(ನ್ಯೂಸ್ ಕಡಬ) newskadaba.com, ಆ.14 ಬೆಂಗಳೂರು: ಹೋಟೆಲ್ಗಳಲ್ಲಿ ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿದ ಬೆನ್ನಲ್ಲೇ, ಇದೀಗ ರಾಜ್ಯದ ಹಾಸ್ಟೆಲ್ಗಳು, ಪಿಜಿ ಹಾಗೂ ಕ್ಯಾಂಟೀನ್ಗಳ ಮೇಲೆಯೂ ಆರೋಗ್ಯ ಇಲಾಖೆ ತೀವ್ರ ನಿಗಾ ವಹಿಸಿದೆ. ಕಳಪೆ ಹಾಗೂ ಅಶುಚಿತ್ವದ ಆಹಾರ ಪೂರೈಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಎಚ್ಚರಿಸಿದ್ದಾರೆ.
ಸರ್ಕಾರಿ, ಖಾಸಗಿ ಹಾಗೂ ಸಹಕಾರಿ ಹಾಸ್ಟೆಲ್ಗಳು, ಪಿಜಿಗಳು ಮತ್ತು ಸಾರ್ವಜನಿಕ ಕ್ಯಾಂಟೀನ್ಗಳಲ್ಲಿ ಆಹಾರ ತಯಾರಿಕೆ ಹಾಗೂ ಪೂರೈಕೆ ವ್ಯವಸ್ಥೆಯನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.ಆಹಾರದ ಗುಣಮಟ್ಟ, ಅಡುಗೆಮನೆಯ ಶುಚಿತ್ವ ಹಾಗೂ ದಿನಸಿ/ಆಹಾರ ಪದಾರ್ಥಗಳ ಸುರಕ್ಷಿತ ಸಂಗ್ರಹಣೆಯನ್ನು ಪ್ರಮುಖವಾಗಿ ಪರಿಶೀಲಿಸಲಾಗುತ್ತದೆ.ಬೆಂಗಳೂರಿನಲ್ಲಿ ಈಗಾಗಲೇ ತಪಾಸಣೆ ಆರಂಭವಾಗಿದ್ದು, ಇದೇ ಮಾದರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.
“ಹಣ ಪಡೆದು ಕಳಪೆ ಹಾಗೂ ಅಸುರಕ್ಷಿತ ಆಹಾರ ನೀಡಿ ಗ್ರಾಹಕರಿಗೆ ಮೋಸ ಮಾಡುವುದನ್ನು ಸಹಿಸುವುದಿಲ್ಲ” ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.ತಪಾಸಣೆ ವೇಳೆ ನೈರ್ಮಲ್ಯ ಹಾಗೂ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಂಡುಬಂದರೆ, ಯಾವುದೇ ಮುಲಾಜಿಲ್ಲದೆ ಕಾನೂನುಬದ್ಧ ಕಠಿಣ ಕ್ರಮ ಜರುಗಿಸಲಾಗುವುದು.





