(ನ್ಯೂಸ್ ಕಡಬ) newskadaba.com, ಜು.01: ಕರ್ನಾಟಕದಲ್ಲಿ ಕರಾವಳಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ ಶ್ರಮಿಸುತ್ತಿದ್ದು, ಮಂಗಳೂರಿನಿಂದ ಕ್ರೂಸ್ ಸೇವೆ ಆರಂಭಿಸುವ ಸಾಧ್ಯತೆಯನ್ನು ಪರಿಶೀಲಿಸಲು ಭಾರತದ ಪ್ರಮುಖ ಕ್ರೂಸ್ ಸಂಸ್ಥೆಯಾದ ವಾಟರ್‌ವೇಸ್ ಲೀಷರ್ ಟೂರಿಸಂ ಲಿಮಿಟೆಡ್ ತಾತ್ವಿಕ ಅನುಮೋದನೆ ನೀಡಿದೆ.
ಮುಂಬೈನಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್, ಐಎಎಸ್ ನೇತೃತ್ವದ ತಂಡವು ವಾಟರ್‌ವೇಸ್ ಲೀಷರ್ ಸಂಸ್ಥೆಯ ಸಿಇಒ ಜುರ್ಗೆನ್ ಬೈಲೊಮ್ ಮತ್ತು ನಿರ್ದೇಶಕರೊಂದಿಗೆ ಮೂಲಸೌಕರ್ಯ ಹಾಗೂ ಕಾರ್ಯಾಚರಣೆ ಕುರಿತು ಚರ್ಚಿಸಿದೆ.
ಮುಂದಿನ ತಿಂಗಳು ಸಂಸ್ಥೆಯ ತಾಂತ್ರಿಕ ತಂಡ ಮಂಗಳೂರಿಗೆ ಭೇಟಿ ನೀಡಿ ಬಂದರು ಮೂಲಸೌಕರ್ಯ ಹಾಗೂ ವಾಣಿಜ್ಯ ಸಾಮರ್ಥ್ಯದ ಕುರಿತು ಪರಿಶೀಲನೆ ನಡೆಸಲಿದೆ.ಮುಂಬೈ ಅಂತರರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಮಾದರಿಯಲ್ಲಿ ಮಂಗಳೂರಿನಲ್ಲೂ ಅಂತರರಾಷ್ಟ್ರೀಯ ಮಟ್ಟದ ಕ್ರೂಸ್ ಟರ್ಮಿನಲ್ ನಿರ್ಮಾಣದ ಸಾಧ್ಯತಾ ಅಧ್ಯಯನಕ್ಕೆ ಸೂಚಿಸಲಾಗಿದೆ.
ಕರಾವಳಿಯಲ್ಲಿ ಕ್ರೂಸ್ ಪ್ರವಾಸೋದ್ಯಮದಿಂದ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಹೂಡಿಕೆಗೆ ಹೊಸ ಉತ್ತೇಜನ ಸಿಗಲಿದೆ ಎಂದು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.








