(ನ್ಯೂಸ್ ಕಡಬ) newskadaba.com ಮಂಗಳೂರು, ಜು. 31. ಮನೆ-ಮನೆ ಭೇಟಿ ಮೂಲಕ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡದ ಹಾಗೂ ಹಿಂದುಳಿದ ವರ್ಗದವರ ಜಾತಿ ಪ್ರಮಾಣ ಪತ್ರ ಹಂಚಿಕೆ ಮಾಡುವ ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು, ಈ ನಿಟ್ಟಿನಲ್ಲಿ ಗ್ರಾಮಕ್ಕೆ ಸಂಬಂಧಿಸಿದಂತೆ ಒಕ್ಕೂಟದ ಸದಸ್ಯರು ಈ ಕಾರ್ಯದಲ್ಲಿ ಸಹಕರಿಸಬೇಕು ಎಂದು ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕುಮಾರ್ ಹೊಳ್ಳ ತಿಳಿಸಿದರು. ಅವರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ವಿಬಿ-ಜಿ ರಾಮ್ –ಜಿ ವಿಶೇಷ ಮಾಹಿತಿ ಕಾರ್ಯಕ್ರಮ ಹಾಗೂ ತಾಲ್ಲೂಕು ಸಾನಿಧ್ಯ ಸಂಜೀವಿನಿ ಒಕ್ಕೂಟದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಬಿ-ಜಿ ರಾಮ್ –ಜಿ ಸಹಾಯಕ ನಿರ್ದೇಶಕ ಮಹೇಶ್ ಅಂಬೆಕಲ್ ಮಾತನಾಡಿ, ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ ಗಾರ್ ಆಂಡ್ ಅಜೀವಿಕ್ ಮಿಷನ್ ( ಗ್ರಾಮೀಣ) ಯೋಜನೆಯು ಜುಲೈ 1ರಿಂದ ದೇಶದಾದ್ಯಂತ ಜಾರಿಗೆ ಬಂದಿರುತ್ತದೆ. ಈ ಯೋಜನೆಯಲ್ಲಿ ಪ್ರತೀ ಕುಟುಂಬಕ್ಕೆ 125 ಮಾನವ ದಿನಗಳ ಸೃಜನೆಗೆ ಅವಕಾಶ ಕಲ್ಪಿಸಲಾಗಿದೆ. ಕೂಲಿ ಮೊತ್ತ ರೂ.370 ರಿಂದ ರೂ.382 ಕ್ಕೆ ಹೆಚ್ಚಳಗೊಂಡಿದೆ ಎಂದರು.
ಈ ಯೋಜನೆಯಲ್ಲಿ 318 ರೀತಿಯ ಕಾಮಗಾರಿಗಳಿವೆ. ಈ ಬಾರಿ ಯೋಜನೆಯಲ್ಲಿ 4 ಪ್ರಮುಖ ಆದ್ಯತಾ ವಲಯಗಳಿದ್ದು, ಅದರಲ್ಲಿ ಚಟುವಟಿಕೆಗಳಾದ ದನದ ಹಟ್ಟಿ, ಕೋಳಿ ಶೆಡ್, ಮೇಕೆ ಶೆಡ್ ಮುಂತಾದ ಕಾಮಗಾರಿಗಳನ್ನು ಅನುಷ್ಠಾನ ಮಾಡಿಸಿಕೊಂಡು ಮಹಿಳೆಯರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬಹುದು. ಸಂಪೂರ್ಣ ಪಾರದರ್ಶಕತೆ ಮತ್ತು ತಂತ್ರಜ್ಞಾನದೊಂದಿಗೆ ವಿಬಿ-ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಒಕ್ಕೂಟದ ಮಹಿಳೆಯರು ನೇರವಾಗಿ ಗ್ರಾಮಸ್ಥರೊಂದಿಗೆ ನಿಕಟ ಸಂಪರ್ಕದಲ್ಲಿ ಇರುವುದರಿಂದ ಈ ಯೋಜನೆಯನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಇದೇ ವೇಳೆ ತಾಲ್ಲೂಕು ಸಾನಿಧ್ಯ ಸಂಜೀವಿನಿ ಒಕ್ಕೂಟದ ಪ್ರಗತಿ ಪರಿಶೀಲನೆಯು ನಡೆಯಿತು. ವೇದಿಕೆಯಲ್ಲಿ ತಾಲ್ಲೂಕು ಪಂಚಾಯತ್ ಯೋಜನಾಧಿಕಾರಿ ಸುಕನ್ಯಾ, ತಾಲ್ಲೂಕು ಸಾನಿಧ್ಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಜ್ರಾಕ್ಷಿ ಪಿ ಶೆಟ್ಟಿ, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ (ಎನ್.ಆರ್.ಎಲ್.ಎಮ್ ) ಸುಬ್ರಹ್ಮಣ್ಯ ಮತ್ತಿತ್ತರರು ಉಪಸ್ಥಿತರಿದ್ದರು.












