(ನ್ಯೂಸ್ ಕಡಬ) newskadaba.com, ಜು.31 :ಕಳೆದ ೧೧ ವರ್ಷಗಳಿಂದ ಬಂಧನದಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಕೊಲೆಯತ್ನ ಪ್ರಕರಣದ ಪ್ರಮುಖ ಆರೋಪಿಯನ್ನು ಮಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕರ್ನೆಳ್ಳಿ ಗ್ರಾಮದ ನಿವಾಸಿ ಚುಂಕಿ ಆಕಾಶಭವನ ಅಲಿಯಾಸ್ ಸಂತೋಷ್ ಎಸ್ (೩೪) ಎಂದು ಗುರುತಿಸಲಾಗಿದೆ.
೨೦೧೫ ರಲ್ಲಿ ಆಕಾಶಭವನದಲ್ಲಿ ನಡೆದ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಅಶೋಕ್ ಕುಮಾರ್ ಕೊಟ್ಟಾರಿ ಹಾಗೂ ಮತ್ತೊಬ್ಬ ಆರೋಪಿ ಜಗ್ಗು ನಡುವೆ ಗಲಾಟೆ ನಡೆದಿತ್ತು.ಗಲಾಟೆಯ ವೈಷಮ್ಯದಿಂದ ಪ್ರಮುಖ ಆರೋಪಿ ಚುಂಕಿ ಆಕಾಶ್ ಭವನ್ ಹಾಗೂ ಆತನ ಸಹಚರರಾದ ರಂಜಿತ್, ಧನು, ಧೂಮಾ, ನರೇಶ್ (ಸ್ವೀಟಿ) ಮತ್ತು ಜಗ್ಗು ಸೇರಿ ಅಶೋಕ್ ಕುಮಾರ್ ಕೊಟ್ಟಾರಿ ಅವರ ಮೇಲೆ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ (ಮೊ.ಸಂ. ೧೩೫/೨೦೧೫) ದಾಖಲಾಗಿತ್ತು. ಘಟನೆಯ ನಂತರದಿಂದ ಆರೋಪಿ ತಲೆಮರೆಸಿಕೊಂಡಿದ್ದರಿಂದ ನ್ಯಾಯಾಲಯವು ಆತನ ವಿರುದ್ಧ ದೀರ್ಘಾವಧಿ ವಾರಂಟ್ (LPC No. ೨೫/೨೦೨೫) ಹೊರಡಿಸಿತ್ತು.
ಸಾಕಷ್ಟು ಸಮಯದಿಂದ ಸುಳಿವು ಸಿಗದಿದ್ದ ಆರೋಪಿಯ ಕುರಿತು ಸಿಸಿಬಿ ಪೊಲೀಸರು ಖಚಿತ ಮಾಹಿತಿ ಸಂಗ್ರಹಿಸಿ, ಜುಲೈ ೨೯, ೨೦೨೬ ರಂದು ಹಾವೇರಿ ಜಿಲ್ಲೆಯ ಚಿಕ್ಕೆರೂರು ಎಂಬಲ್ಲಿ ಆತನನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.








