ಕಡಬ:ಸರಕಾರಿ ಮಾದರಿ ಶಾಲೆಗೆ ವಿಜ್ಞಾನ ಮಾದರಿಗಳ ಕೊಡುಗೆ



(ನ್ಯೂಸ್‌ ಕಡಬ) newskadaba.com,  ಜು.30  ಕಡಬ: ಕುತೂಹಲಗಳೇ ಹಲವು ಸಂಶೋಧನೆಗಳಿಗೆ ಕಾರಣವಾಗಿದೆ ಎನ್ನುವುದು ನಮಗೆಲ್ಲಾ ತಿಳಿದ ಸಂಗತಿಯಾಗಿದೆ. ಅದೇ ರೀತಿ ಮಕ್ಕಳು ಎಳೆವೆಯಲ್ಲಿಯೇ ವೈಜ್ಞಾನಿಕತೆಯ ಬಗ್ಗೆ ಆಸಕ್ತಿ ಅಗತ್ಯ ತೆಳೆಯುವುದರಿಂದ ಅದು ಭವಿಷ್ಯದಲ್ಲಿ  ಹೆಚ್ಚಿನ ಸಾಧನೆಗಳಿಗೆ ಬುನಾದಿಯಾಗಲು ಸಾಧ್ಯ ಎಂದು ಬ್ಯಾಂಕ್‌ ಆಫ್‌ ಬರೋಡ ಸಂಯೋಜಿತ ವಿಜಯ ಗ್ರಾಮೀಣ ಅಭಿವೃದ್ಧಿ  ಪ್ರತಿಷ್ಠಾನದ ಕಾರ್ಯದರ್ಶಿ ಬೆಳ್ಳಿಪ್ಪಾಡಿ ರಾಜೇಂದ್ರ ರೈ ಅವರು ಅಭಿಪ್ರಾಯಪಟ್ಟರು.







ಅವರು  ಕಡಬ ಸರಕಾರಿ ಮಾದರಿ ಹಿ.ಪ್ರಾ.ಶಾಲೆಯ ವಿಜ್ಞಾನ ಪ್ರಯೋಗಾಲಯಕ್ಕೆ    ಬ್ಯಾಂಕ್‌ ಆಫ್‌ ಬರೋಡ ಸಂಯೋಜಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ನೀಡಲಾದ ವಿಜ್ಞಾನ ಮಾದರಿಗಳನ್ನು ಹಸ್ತಾಂತರಿಸಿ ಮಾತನಾಡಿದರು. ಮಕ್ಕಳು ತಮ್ಮೊಳಗೆ ಮೂಡುವ ಸಂಶಯಗಳು ಹಾಗೂ ಕುತೂಹಲಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನಗಳನ್ನು ಮಾಡಿದಾಗ ಅವರ ಜ್ಞಾನ ಸಂಪತ್ತು ವೃದ್ಧಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.






ಈ ಹಿಂದೆ ವಿಜಯ ಬ್ಯಾಂಕ್‌ನ ಮೂಲಕ ಆರಂಭಗೊಂಡ  ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಇಂದು ಬ್ಯಾಂಕ್‌ ಆಫ್‌ ಬರೋಡದ ಅಧೀನದಲ್ಲಿ  ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ. ಮುಖ್ಯವಾಗಿ ಜನರನ್ನು ಕೌಶಲಯುಕ್ತ  ತರಬೇತಿಗಳ ಮೂಲಕ ಸ್ವ ಉದ್ಯೋಗಕ್ಕೆ ಸಿದ್ಧಗೊಳಿಸಿ ಸ್ವತಂತ್ರ ಬದುಕು ಕಟ್ಟಿಕೊಳ್ಳಲು ನೆರವಾಗುವುದು ಹಾಗೂ ತರಬೇತಿಗಳನ್ನು ಹಮ್ಮಿಕೊಳ್ಳುವುದು ಪ್ರತಿಷ್ಠಾನದ ಪ್ರಧಾನ ಕೆಲಸಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವ ಉದ್ದೇಶದಿಂದ ಶಾಲೆಯ ವಿಜ್ಞಾನ ಪ್ರಯೋಗಾಲಯಕ್ಕೆ    ಪ್ರತಿಷ್ಠಾನದ ವತಿಯಿಂದ  ವಿಜ್ಞಾನ ಮಾದರಿಗಳನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು  ಅವರು ವಿವರಿಸಿದರು.

ಮುಖ್ಯಅತಿಥಿಯಾಗಿ ಆಗಮಿಸಿದ್ದ  ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್‌ ಅವರು ಮಾತನಾಡಿ ಗ್ರಾಮೀಣ ಸರಕಾರಿ ಕನ್ನಡಮಾಧ್ಯಮ  ಶಾಲೆಗಳು ಉಳಿಯಬೇಕಾದರೆ  ಸಮುದಾಯದ ಸಹಕಾರ ಅತ್ಯಗತ್ಯ. ಸರಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳು ಜೀವನದಲ್ಲಿನ ಎಡರು ತೊಡರುಗಳನ್ನು  ಎದುರಿಸುವಲ್ಲಿ ಇತರರಿಗಿಂತ ಹೆಚ್ಚು ಸಮರ್ಥರಾಗಿರುತ್ತಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ  ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್‌ಕುಮಾರ್‌ ಅವರು ಶಾಲೆಯ ವಿಜ್ಞಾನ ಪ್ರಯೋಗಾಲಯಕ್ಕೆ  ವಿಜ್ಞಾನ ಮಾದರಿಗಳ ಕೊಡುಗೆ ನೀಡಿದ ಪ್ರತಿಷ್ಠಾನದ ಪ್ರಮುಖರಿಗೆ ನಾವು ಕೃತಜ್ಞರಾಗಿದ್ದೇವೆ ಎಂದರು.

ಬ್ಯಾಂಕ್‌ ಆಫ್‌ ಬರೋಡ ಕೋಡಿಂಬಾಳ ಖಾಶಾ ವ್ಯವಸ್ಥಾಪಕ ರಾಮ್‌ಕುಮಾರ್‌ ,ಜೇಸಿಐ ಕಡಬ ಕದಂಬ ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷ ನಾಗರಾಜ್‌ ಎನ್‌.ಕೆ., ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಎಸ್‌.ದಿನೇಶ್‌  ಆಚಾರ್ಯ, ನಿವೃತ್ತ ಶಿಕ್ಷಕ ಕಿಟ್ಟಣ್ಣ ರೈ,  ಎಸ್‌ಡಿಎಂಸಿ ಉಪಾಧ್ಯಕ್ಷæ ರೇವತಿ ಶುಭಹಾರೈಸಿದರು.ರಾಜೇಂದ್ರ ರೈ ಬೆಳ್ಳಿಪ್ಪಾಡಿ, ಜ್ಯೋತಿರಾಜ್‌ ಹಾಗೂ ನಾಗರಾಜ್‌ ಎನ್‌.ಕೆ. ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಿ ವಿಜೇತರಿಗೆ ಪ್ರತಿಷ್ಠಾನದ ವತಿಯಿಂದ ಬಹುಮಾನ ನೀಡಲಾಯಿತು.ಮುಖ್ಯಶಿಕ್ಷಕ  ಆನಂದ ಅಜಿಲ ಸ್ವಾಗತಿಸಿ, ಶಿಕ್ಷಕಿ ತೀರ್ಥಾವತಿ  ನಿರೂಪಿಸಿದರು.  ಶೋಭಾ ಬಿ. ವಂದಿಸಿದರು.

 

error: Content is protected !!
Scroll to Top