(ನ್ಯೂಸ್ ಕಡಬ) newskadaba.com ಜು. 28. ಪಾಲಕರ ಸಭೆ ಹಾಗೂ ಮಾದಕ ವ್ಯಸನ ಮುಕ್ತ ಇದರ ಜಾಗೃತಿ ಕಾರ್ಯಕ್ರಮವು ಕಡಬದ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ ಶೆಟ್ಟಿ ಕಡಬ ವಹಿಸಿ ಇವತ್ತಿನ ವಿದ್ಯಾವಂತ ಯುವ ಸಮುದಾಯದಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿ ಸಮಾಜದಲ್ಲಿ ಋಣಾತ್ಮಕ ಬದಲಾವಣೆಗಳು ಹೆಚ್ಚಾಗಿ ಕಂಡುಬರುತ್ತಿದೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ ವೇದಿಕೆ ಕಡಬ ಇದರ ಸ್ಥಾಪಕ ಅಧ್ಯಕ್ಷರು ಹಾಗೂ ವಕೀಲರಾದ ಶ್ರೀ ಮಹೇಶ್ ಕೆ. ಸವಣೂರು ಆಗಮಿಸಿ, ನಮ್ಮ ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಮಾಡಬೇಕು, ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಟ್ಟರೆ ಸಾಲದು ಅವರಲ್ಲಿ ಮಾನವೀಯ ಗುಣಗಳನ್ನ ಬೆಳೆಸಬೇಕು ಎಂದು ಪೋಷಕರಿಗೆ ತಿಳಿಹೇಳಿದರು. ಸರಸ್ವತೀ ವಿದ್ಯಾಲಯದ ಸಂಚಾಲಕಿ ಶ್ರೀಮತಿ ಸವಿತಾ ಶಿವಸುಬ್ರಮಣ್ಯ ಭಟ್ ಮಾತನಾಡಿ ಸಂಸ್ಥೆಯ ಉದ್ದೇಶಗಳನ್ನು ಈಡೇರಿಸುವಲ್ಲಿ ತಾವುಗಳು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ವಿನಂತಿಸಿಕೊಂಡರು.
ವೇದಿಕೆಯಲ್ಲಿ ಸರಸ್ವತೀ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರವಿರಾಜ್ ಶೆಟ್ಟಿ ಕಡಬ, ನಿರ್ದೇಶಕರಾದ ಶ್ರೀಮತಿ ಪುಲಸ್ಯ ರೈ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಕ- ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಹರಿಪ್ರಿಯಾ ಹರಿದಾಸ್ ಪ್ರಾರ್ಥಿಸಿ, ಮುಖ್ಯ ಶಿಕ್ಷಕಿ ಶ್ರೀಮತಿ ಶೈಲಶ್ರೀ ರೈ ಎಸ್ ಸ್ವಾಗತಿಸಿದರು. ಶ್ರೀಮತಿ ಜಲಜಾಕ್ಷಿ.ಬಿ.ವಿ. ವಂದಿಸಿ, ಶ್ರೀಮತಿ ಸೌಮ್ಯ ಕೆ.ಎ ಕಾರ್ಯಕ್ರಮ ನಿರೂಪಿಸಿದರು.









