(ನ್ಯೂಸ್ ಕಡಬ) newskadaba.com, ಜು.27 : ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಸೂರಲ್ಪಾಡಿ ಸಮೀಪ ನಿರ್ಮಾಣ ಹಂತದಲ್ಲಿರುವ ಟೋಲ್ ಪ್ಲಾಜಾ ಬಳಿ ಖಾಸಗಿ ಎಕ್ಸ್‌ಪ್ರೆಸ್ ಬಸ್ಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸಿಮೆಂಟ್ ತಡೆಗೋಡೆಗೆ (ಡಿವೈಡರ್) ಡಿಕ್ಕಿಯಾಗಿದೆ.
ಅಪಘಾತದ ವೇಳೆ ಬಸ್‌ನಲ್ಲಿ ಒಟ್ಟು 35 ಮಂದಿ ಪ್ರಯಾಣಿಕರಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕಾರ್ಕಳದಿಂದ ಮಂಗಳೂರಿಗೆ ಸಾಗುತ್ತಿದ್ದ ಬಸ್‌ಗೆ ಎದುರಾಗಿ ಏಕಾಏಕಿ ಎಡಭಾಗಕ್ಕೆ ತಿರುಗಿದ ಟಿಪ್ಪರ್ ಲಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ಬಸ್ ನಿಯಂತ್ರಣ ತಪ್ಪಿದೆ.
ಅಪಘಾತದ ತೀವ್ರತೆಗೆ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ ಚಾಲಕ ಹಾಗೂ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಬಜ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.









