(ನ್ಯೂಸ್ ಕಡಬ) newskadaba.com, ಜು.26: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ LGF ಪಾರ್ಕಿಂಗ್ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ವಿಠ್ಠಲ್ ಹೊಸಮನಿ ಅವರಿಗೆ ಅನಾಥವಾಗಿ ಬಿದ್ದಿದ್ದ ಕಪ್ಪು ಬಣ್ಣದ ಪೌಚ್ ಪತ್ತೆಯಾಗಿತ್ತು.
ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳದಿಂದ ತಪಾಸಣೆ ನಡೆಸಿದ ಬಳಿಕ ಪೌಚ್ ತೆರೆಯಲಾಯಿತು. ಅದರಲ್ಲಿ ಐಫೋನ್, ಚಿನ್ನದ ಉಂಗುರ, $10,000 (ಸುಮಾರು ₹9 ಲಕ್ಷ), 500 ದಿರ್ಹಾಮ್, ಪಾಸ್‌ಪೋರ್ಟ್, ಬೋರ್ಡಿಂಗ್ ಪಾಸ್ ಹಾಗೂ ಬ್ಯಾಂಕ್ ಕಾರ್ಡ್‌ಗಳು ಇದ್ದವು.
ಪೌಚ್ ದುಬೈಯಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಬಂದಿದ್ದ ನಿಶಾಲ್ ಶಾಹಿಕ್ ಎಂಬ ಪ್ರಯಾಣಿಕರಿಗೆ ಸೇರಿದ್ದಾಗಿತ್ತು. ಸಿಸಿಟಿವಿ ಮತ್ತು ಬೋರ್ಡಿಂಗ್ ಪಾಸ್ ಮಾಹಿತಿ ಆಧಾರದ ಮೇಲೆ ಸಿಐಎಸ್‌ಎಫ್ (CISF) ಸಿಬ್ಬಂದಿ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದರು.
ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ ಎಲ್ಲಾ ವಸ್ತುಗಳನ್ನು ಸುರಕ್ಷಿತವಾಗಿ ಮಾಲೀಕರಿಗೆ ಹಸ್ತಾಂತರಿಸಲಾಯಿತು. CISF ಸಿಬ್ಬಂದಿಯ ತ್ವರಿತ ಕಾರ್ಯಾಚರಣೆ ಹಾಗೂ ಕರ್ತವ್ಯನಿಷ್ಠೆಗೆ ಪ್ರಯಾಣಿಕ ನಿಶಾಲ್ ಶಾಹಿಕ್ ಕೃತಜ್ಞತೆ ಸಲ್ಲಿಸಿದ್ದಾರೆ.









