(ನ್ಯೂಸ್ ಕಡಬ) newskadaba.com, ಜು.26: ಕೆನಡಾದ ನಿಯಾಗ್ರಾ-ಆನ್-ದಿ-ಲೆಕ್‌ನಲ್ಲಿ ನಡೆದ 2026ರ ವಿಶ್ವ ಜೂನಿಯರ್ ಸ್ಕ್ವಾಶ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ 18 ವರ್ಷದ ಅನಾಹತ್ ಸಿಂಗ್ ಪ್ರಶಸ್ತಿ ಗೆದ್ದು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜುಲೈ 25 ರಂದು ನಡೆದ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಅನಾಹತ್, ಈಜಿಪ್ಟ್‌ನ ರುಕಯ್ಯಾ ಸಲೇಮ್ (2ನೇ ಶ್ರೇಯಾಂಕ) ವಿರುದ್ಧ 11-3, 11-7, 11-9 ನೇರ ಸೆಟ್‌ಗಳ ಭರ್ಜರಿ ಜಯ ದಾಖಲಿಸಿದರು.2011 ರಿಂದ ಸತತ 13 ಆವೃತ್ತಿಗಳಿಂದ ಮಹಿಳೆಯರ ವಿಭಾಗದಲ್ಲಿ ಈಜಿಪ್ಟ್ ಆಟಗಾರ್ತಿಯರೇ ಚಾಂಪಿಯನ್ ಆಗುತ್ತಿದ್ದರು.
ಅನಾಹತ್ ಈ ಸುದೀರ್ಘ ಪ್ರಾಬಲ್ಯಕ್ಕೆ ಅಂತ್ಯ ಹಾಡಿದ್ದಾರೆ. ಅಲ್ಲದೆ, 2010 ರಲ್ಲಿ ಅಮೆರಿಕದ ಅಮಾಂಡಾ ಸೋಭಿ ಬಳಿಕ ಚಾಂಪಿಯನ್ ಆದ ಮೊದಲ ಈಜಿಪ್ಟ್‌ಯೇತರ ಆಟಗಾರ್ತಿ ಎಂಬ ದಾಖಲೆಯನ್ನೂ ಬರೆದಿದ್ದಾರೆ.2005 ರಲ್ಲಿ ಜೋಶ್ನಾ ಚಿನಪ್ಪ ಫೈನಲ್ ತಲುಪಿದ್ದು ಇದುವರೆಗಿನ ಭಾರತದ ಅತ್ಯುತ್ತಮ ಸಾಧನೆಯಾಗಿತ್ತು, ಅದನ್ನು ದಾಟಿ ಅನಾಹತ್ ಈಗ ಇತಿಹಾಸ ಸೃಷ್ಟಿಸಿದ್ದಾರೆ.









