(ನ್ಯೂಸ್ ಕಡಬ) newskadaba.com ಜು. 16:ಮೈಸೂರು ಇಲ್ಲಿನ ಬಾರಾಕೊಟ್ರಿ ಬಡಾವಣೆಯ ಹೈ-ಸೆಕ್ಯೂರಿಟಿ ಅಪಾರ್ಟ್‌ಮೆಂಟ್ ಒಂದರಲ್ಲಿ ಖ್ಯಾತ ಅರವಳಿಕೆ ತಜ್ಞ ವೈದ್ಯರೊಬ್ಬರ ಭೀಕರ ಕೊಲೆಯಾಗಿದ್ದು, ಇಡೀ ಸಾಂಸ್ಕೃತಿಕ ನಗರಿಯನ್ನು ಬೆಚ್ಚಿಬೀಳಿಸಿದೆ. ಖಾಸಗಿ ಆಸ್ಪತ್ರೆಯ ವೈದ್ಯರಾಗಿದ್ದ ಡಾ. ಕಿರಣ್ ಹೊನ್ನಣ್ಣವರ (45) ಕೊಲೆಯಾದ ದುರ್ದೈವಿ. ಕೃತ್ಯದ ಹಿನ್ನೆಲೆಯಲ್ಲಿ ಅವರ ಪತ್ನಿ, ವೃತ್ತಿಯಲ್ಲಿ ನೇತ್ರ ತಜ್ಞೆಯಾಗಿರುವ ಡಾ. ಪ್ರಿಯಾಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿಯೇ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳು ಕೇವಲ ಡಾ. ಕಿರಣ್ ಅವರನ್ನು ಹತ್ಯೆಗೈಯುವುದಷ್ಟೇ ಅಲ್ಲದೇ, ಅವರ 8 ವರ್ಷದ ಬುದ್ಧಿಮಾಂದ್ಯ ಪುತ್ರ ನಿಹಿತ್ ಮೇಲೂ ಚಾಕುವಿನಿಂದ ತೀವ್ರವಾಗಿ ಇರಿದಿದ್ದಾರೆ. ಬುಧವಾರ ಸಂಜೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಮಗು ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವುದು ಕಂಡುಬಂದಿದೆ. ಕೃತ್ಯ ಎಸಗಿದ ಬಳಿಕ ಆರೋಪಿ ಡಾ. ಪ್ರಿಯಾಂಕಾ ಶವ ಹಾಗೂ ಗಾಯಗೊಂಡ ಮಗುವಿನ ಪಕ್ಕದಲ್ಲೇ ಯಾವುದೇ ಆತಂಕವಿಲ್ಲದೆ ಮೊಬೈಲ್ ನೋಡುತ್ತಾ ಕಾಲ ಕಳೆದಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ಮಧ್ಯಾಹ್ನದವರೆಗೂ ಡಾ. ಕಿರಣ್ ಅವರ ಫೋನ್ ಸಿಗದಿದ್ದಾಗ ಗಾಬರಿಗೊಂಡ ಸಂಬಂಧಿಕರು ಪ್ರಿಯಾಂಕಾಗೆ ಕರೆ ಮಾಡಿದ್ದಾರೆ. ಈ ವೇಳೆ ಆಕೆ “ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ” ಅಥವಾ “ಆಸ್ಪತ್ರೆಗೆ ಹೋಗಿದ್ದಾರೆ” ಎಂದು ಸುಳ್ಳು ಹೇಳಿ ದಾರಿ ತಪ್ಪಿಸಿದ್ದಾಳೆ. ಸಂಜೆ ವೇಳೆಗೆ ಸಂಶಯ ಬಲಿತು ಸಂಬಂಧಿಕರು ಪೊಲೀಸರೊಂದಿಗೆ ಬಾರಾಕೊಟ್ರಿಯ ‘ರಂಕಾ ಸ್ಟೆಲ್ಲೊ’ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ಗೆ ಬಂದು ಬಾಗಿಲು ತೆರೆಸಿದಾಗ ಈ ಭೀಕರ ಘಟನೆ ಬೆಳಕಿಗೆ ಬಂದಿದೆ..
ಮೃತರ ಕುಟುಂಬಸ್ಥರ ದೂರಿನ ಮೇರೆಗೆ ಉಪನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಡಾ. ಪ್ರಿಯಾಂಕಾ ಪ್ರಸ್ತುತ ದಿಗ್ಭ್ರಮೆಗೊಂಡ ಸ್ಥಿತಿಯಲ್ಲಿದ್ದು, ಆಕೆಯ ಹೇಳಿಕೆಗಳು ಗೊಂದಲಮಯವಾಗಿವೆ. ಹೆಚ್ಚಿನ ವಿಚಾರಣೆ ಮತ್ತು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಕೊಲೆಗೆ ನಿಖರ ಕಾರಣ ಹಾಗೂ ಸಮಯ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.headlines plz









