(ನ್ಯೂಸ್ ಕಡಬ) newskadaba.com ಜು. 14. ಎಲ್ಪಿಜಿ ಗ್ರಾಹಕರಿಗಾಗಿ ಕೆಲವು ಪ್ರಮುಖ ನಿಯಮಗಳು ಜಾರಿಗೆ ಬಂದಿದೆ. ವಿಶೇಷವಾಗಿ ಮನೆ ಅಥವಾ ನಗರ ಬದಲಾಯಿಸುವವರು ಹಾಗೂ ಪೈಪ್ ಮೂಲಕ ಸರಬರಾಜಾಗುವ ನೈಸರ್ಗಿಕ ಅನಿಲ ಸಂಪರ್ಕ ಪಡೆಯಲು ಬಯಸುವವರು ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇಲ್ಲವಾದರೆ ಸಂಪರ್ಕ ವರ್ಗಾವಣೆಯಲ್ಲಿ ವಿಳಂಬವಾಗುವುದು ಮಾತ್ರವಲ್ಲ ಗ್ಯಾಸ್ ಸಂಪರ್ಕ ಕೂಡಾ ರದ್ದಾಗುವ ಸಾಧ್ಯತೆ ಕೂಡಾ ಇದೆ
ಗ್ರಾಹಕರು ಒಂದೇ ಗ್ಯಾಸ್ ಏಜೆನ್ಸಿಯ ಸೇವಾ ವ್ಯಾಪ್ತಿಯಲ್ಲಿ ಹೊಸ ಮನೆಗೆ ಸ್ಥಳಾಂತರಗೊಂಡರೆ ಹೊಸ ಸಂಪರ್ಕದ ಅಗತ್ಯವಿರುವುದಿಲ್ಲ; ಅಗತ್ಯ ದಾಖಲೆಗಳನ್ನು ನೀಡಿ ವಿಳಾಸ ನವೀಕರಿಸಿದರೆ (Update) ಸಾಕು.
ಹೊಸ ಮನೆ ಬೇರೆ ಏಜೆನ್ಸಿಯ ವ್ಯಾಪ್ತಿಯಲ್ಲಿದ್ದರೆ, ಹಳೆಯ ಏಜೆನ್ಸಿಯಿಂದ ‘ಟ್ರಾನ್ಸ್ಫರ್ ಟರ್ಮಿನೇಶನ್ ವೋಚರ್‘ ಪಡೆದು ಹೊಸ ಏಜೆನ್ಸಿಗೆ ಸಲ್ಲಿಸುವ ಮೂಲಕ ಸಂಪರ್ಕವನ್ನು ವರ್ಗಾಯಿಸಿಕೊಳ್ಳಬಹುದು.
ಗ್ರಾಹಕರು ಬೇರೆ ನಗರಕ್ಕೆ ವಲಸೆ ಹೋಗುವಾಗ ಹಳೆಯ ಏಜೆನ್ಸಿಗೆ ಸಿಲಿಂಡರ್ ಮತ್ತು ರೆಗ್ಯುಲೇಟರ್ ಹಿಂತಿರುಗಿಸಿ, ಭದ್ರತಾ ಠೇವಣಿ (Security Deposit) ಹಾಗೂ ಟರ್ಮಿನೇಶನ್ ವೋಚರ್ ಪಡೆದುಕೊಳ್ಳಬೇಕು. ನಂತರ ಹೊಸ ನಗರದಲ್ಲಿ ಹೊಸ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬೇಕು.
ಪೈಪ್ಡ್ ನೈಸರ್ಗಿಕ ಅನಿಲ (PNG) ಸಂಪರ್ಕ ಪಡೆಯಲು ಇಚ್ಛಿಸುವವರು ತಮ್ಮ ಹಳೆಯ ಎಲ್.ಪಿಜಿ ಸಂಪರ್ಕವನ್ನು ಸ್ವಯಂಪ್ರೇರಿತವಾಗಿ ರದ್ದುಗೊಳಿಸಬೇಕು. ಎರಡೂ ಸಂಪರ್ಕಗಳನ್ನು ಒಟ್ಟಿಗೆ ಹೊಂದುವಂತಿಲ್ಲ.
ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ಸಂಪರ್ಕ ವರ್ಗಾವಣೆ ವಿಳಂಬವಾಗಬಹುದು ಅಥವಾ ಗ್ಯಾಸ್ ಸಂಪರ್ಕ ರದ್ದಾಗಬಹುದು ಎಂದು ಎಚ್ಚರಿಸಲಾಗಿದೆ.













