(ನ್ಯೂಸ್ ಕಡಬ) newskadaba.com ಜು. 13. ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ ಹಣ ಕಳ್ಳತನವಾದ ಹಿನ್ನೆಲೆಯಲ್ಲಿ, ರಾಜ್ಯದ ಮುಜರಾಯಿ ದೇವಸ್ಥಾನಗಳ ಹುಂಡಿ ಹಣದ ಸುರಕ್ಷತೆ ಮತ್ತು ಪಾರದರ್ಶಕತೆಗಾಗಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರು ಹುಂಡಿ ನಗದು, ಚಿನ್ನ, ಬೆಳ್ಳಿ, ಭದ್ರತೆಗೆ ಸಂಬಂಧಿಸಿದಂತೆ ರಾಜ್ಯದ ಧಾರ್ಮಿಕ ದತ್ತಿ, ಜಿಲ್ಲಾಧಿಕಾರಿಗಳು, ಜಿಲ್ಲಾ ಎಸ್ಪಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿ, ಆದೇಶ ಹೊರಡಿಸಿದ್ದಾರೆ
ಪ್ರಮುಖ ಸೂಚನೆಗಳು
1.ತಾಂತ್ರಿಕ ಮತ್ತು ಸಿಸಿಟಿವಿ ಭದ್ರತೆ: ದೇವಸ್ಥಾನದ ಹುಂಡಿಗಳಿಗೆ ನಾಲ್ಕೂ ದಿಕ್ಕಿನಿಂದ ಕಾಣುವಂತೆ ಕಡ್ಡಾಯವಾಗಿ ಸಿಸಿಟಿವಿ ವೆಬ್ ಕ್ಯಾಮೆರಾಗಳನ್ನು ಅಳವಡಿಸಬೇಕು. ಕರ್ಪೂರದ ಹೊಗೆಯಿಂದ ಲೆನ್ಸ್ ಮಸುಕಾಗದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಕ್ಯಾಮೆರಾಗಳ ಲೈವ್ ಫೀಡ್ ಅನ್ನು ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಕಚೇರಿ ಸರ್ವರ್, ಜಿಲ್ಲಾಧಿಕಾರಿ ಕಚೇರಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ಡ್ಯಾಶ್ ಬೋರ್ಡ್ ಗಳಿಗೆ ಸಂಪರ್ಕಿಸಿ ಮಾನಿಟರ್ ಮಾಡಬೇಕು.
2. ಡಿಜಿಟಲ್ ಪಾವತಿಗೆ ಉತ್ತೇಜನ: ಜೇಬು ಕಳ್ಳತನ ತಡೆಯಲು ಮತ್ತು ಪಾರದರ್ಶಕತೆಗಾಗಿ ಯುಪಿಐ, ಭೀಮ್ ಹಾಗೂ ಕ್ಯೂಆರ್ ಕೋಡ್ ಮೂಲಕ ನಗದು ರಹಿತ ಡಿಜಿಟಲ್ ದೇಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಬ್ಯಾಂಕ್ ಖಾತೆ ವಿವರ ಹೊಂದಿರುವ ಕ್ಯೂಆರ್ ಕೋಡ್ ಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ಹುಂಡಿಗಳಿರುವ ಜಾಗದಲ್ಲಿ ಮಾತ್ರ ಸುರಕ್ಷಿತವಾಗಿ ಅಳವಡಿಸಬೇಕು.
3. ಹುಂಡಿ ಎಣಿಕೆ ಪ್ರಕ್ರಿಯೆ ನಿಯಮಗಳು: ಹೆಚ್ಚು ಕಾಣಿಕೆ ಬರುವ ದೇವಾಲಯಗಳಲ್ಲಿ ವಾರಕ್ಕೊಮ್ಮೆ ಹಾಗೂ ಸಾಧಾರಣ ದೇವಾಲಯಗಳಲ್ಲಿ ಎರಡು ವಾರಕ್ಕೊಮ್ಮೆ ತಹಶೀಲ್ದಾರ್ ಮೇಲ್ವಿಚಾರಣೆಯಲ್ಲಿ ಎಣಿಕೆ ನಡೆಯಬೇಕು.
ಎಣಿಕೆಯಲ್ಲಿ ಸಾರ್ವಜನಿಕರ ಸೇವೆ ನಿಷೇಧಿಸಲಾಗಿದ್ದು, ಕಡ್ಡಾಯವಾಗಿ ಗೃಹ ರಕ್ಷಕದಳ, ಬ್ಯಾಂಕ್ ಸಿಬ್ಬಂದಿ ಅಥವಾ ಸರ್ಕಾರಿ ನೌಕರರನ್ನು ಮಾತ್ರ ಬಳಸಿಕೊಳ್ಳಬೇಕು.
ಹುಂಡಿ ತೆರೆಯುವುದರಿಂದ ಹಿಡಿದು ಎಣಿಕೆ ಮುಗಿದು ಬ್ಯಾಂಕಿಗೆ ಹಸ್ತಾಂತರಿಸುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ಸಮಯ ಮತ್ತು ದಿನಾಂಕದ ದಾಖಲೆಯೊಂದಿಗೆ ವಿಡಿಯೋ ಚಿತ್ರೀಕರಣ ಮಾಡಬೇಕು.
ಹುಂಡೆ ಎಣಿಕೆಯಲ್ಲಿ ಕಂದಾಯ ಅಧಿಕಾರಿಗಳು ಕಡಾಯವಾಗಿ ಭಾಗವಹಿಸಲು ಹುಂಡಿ ಎಣಿಕೆ ದಿನಾಂಕಗಳನ್ನು ಮುಂಚಿತವಾಗಿಯೇ ಕ್ಯಾಲೆಂಡರ್ನಲ್ಲಿ `ಹುಂಡಿ ಎಣಿಕೆ’ ದಿನಗಳನ್ನು ನಿಗದಿಪಡಿಸುವುದು.
ಎಣಿಕೆ ಸಿಬ್ಬಂದಿಗೆ ಫೇಸ್ ರೆಕಗ್ನಿಷನ್ ಅಳವಡಿಸಬೇಕು ಮತ್ತು ಅವರು ಪ್ರವೇಶಿಸುವಾಗ ತಮ್ಮ ಬಳಿ ಇರುವ ನಗದನ್ನು (Cash in hand) ಘೋಷಿಸಬೇಕು. ಸಿಗುವ ಚಿನ್ನ/ಬೆಳ್ಳಿಯನ್ನು ಅಂದೇ ಮೌಲ್ಯಮಾಪನ ಮಾಡಿ ಉಪಖಜಾನೆಗೆ ಜಮಾ ಮಾಡಬೇಕು.
4. ಜಂಟಿ ಪರಿಶೀಲನೆ ಮತ್ತು ವರದಿ ಸಲ್ಲಿಕೆ: ಸ್ಥಳೀಯ ಕಂದಾಯ, ಪೊಲೀಸ್ ಮತ್ತು ಮುಜರಾಯಿ ಅಧಿಕಾರಿಗಳು ಕನಿಷ್ಠ 15 ದಿನಗಳಿಗೊಮ್ಮೆ ಜಂಟಿ ಭೇಟಿ ನೀಡಿ ಸುರಕ್ಷತೆಯನ್ನು ಪರಿಶೀಲಿಸಬೇಕು.
ಪ್ರಮುಖ ‘ಎ’ ಮತ್ತು ‘ಬಿ’ ಪ್ರವರ್ಗದ ದೇವಾಲಯಗಳಿಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಎಸ್ಪಿ ಮತ್ತು ಜಿ.ಪಂ. ಸಿಇಒ ಅವರು ೩ ತಿಂಗಳಿಗೊಮ್ಮೆ ಜಂಟಿ ಪರಿಶೀಲನೆ ನಡೆಸಬೇಕು.
ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಅನುಷ್ಠಾನದ ಪ್ರಗತಿ ಹಾಗೂ ನ್ಯೂನತೆಗಳ ಕುರಿತು ಕ್ರೋಢೀಕೃತ ಮಾಸಿಕ ವರದಿಯನ್ನು ಧಾರ್ಮಿಕ ದತ್ತಿ ಇಲಾಖೆ ಮೂಲಕ ಸರ್ಕಾರಕ್ಕೆ ಹಾಗೂ ಒಳಾಡಳಿತ ಇಲಾಖೆ ಮತ್ತು ಡಿಜಿಪಿ ಕಚೇರಿಗೆ ಸಲ್ಲಿಸಬೇಕು.
ಹುಂಡಿ ಕಳ್ಳತನವಾದರೆ ಸಂಬಂಧಪಟ್ಟ ದೇವಾಲಯ ಮತ್ತು ತಾಲೂಕು ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
ಪರಿಶೀಲನಾ ಕ್ರಮಗಳು:
ಸ್ಥಳೀಯ ಪೊಲೀಸರೊಂದಿಗೆ ಸಿಸಿಟಿವಿ ಲೈವ್ ಫೀಡ್ನ ಏಕೀಕರಣ, ಸ್ಥಳೀಯ ಪೊಲೀಸರಿಂದ ನಿಯಮಿತ ಮೇಲ್ವಿಚಾರಣೆ, ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ, ಅಗ್ನಿ ಸುರಕ್ಷತಾ ಸಿದ್ಧತೆ ಮತ್ತು ನಿರ್ದಿಷ್ಟ ಸುರಕ್ಷತಾ ಮಾನದಂಡಗಳ ಅನುಪಾಲನೆ
ಸಿಸಿಟಿವಿ ಕಣಾವಲು ವ್ಯವಸ್ಥೆಗಳ ಕಾರ್ಯನಿರ್ವಹಣೆ ಮತ್ತು ಸಮರ್ಪಕತೆ, ಸ್ಥಳೀಯ ಪೊಲೀಸರೊಂದಿಗೆ ಸಿಸಿಟಿವಿ ಲೈವ್ ಫೀಡ್ನ ಏಕೀಕರಣ ಮತ್ತು ಕಾರ್ಯಾಚರಣೆಯ ಸ್ಥಿತಿ.
ಸ್ಥಳೀಯ ಕಂದಾಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಪ್ರಾಧಿಕಾರಗಳು ಮತ್ತು ಇತರೆ ಸಂಬಂಧಪಟ್ಟ ಅಧಿಕಾರಿಗಳು ಕನಿಷ್ಠ 15 ದಿನಗಳಿಗೊಮ್ಮೆ ದೇವಾಲಯಗಳಿಗೆ ಜಂಟಿಯಾಗಿ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಬೇಕು. ಮೇಲಿನಂತೆ ಎಲ್ಲಾ ವ್ಯವಸ್ಥೆಗಳು ಸುವ್ಯವಸ್ಥಿತ ರೀತಿಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡು ನ್ಯೂನತೆಗಳಿದ್ದಲ್ಲಿ ಕೂಡಲೇ ಸರಿಪಡಿಸಬೇಕು.
ಜಿಲ್ಲಾಧಿಕಾರಿಗಳು, ಅನುಷ್ಠಾನದ ಹಂತ, ಗಮನಿಸಿದ ನ್ಯೂನತೆಗಳು, ನ್ಯೂನತೆಗಳನ್ನು ಸರಿಪಡಿಸಲು ತೆಗೆದುಕೊಂಡ ಕ್ರಮಗಳು ಮತ್ತು ಕ್ರಿಯಾ ಯೋಜನೆ ಅಂಶಗಳನ್ನು ಸೂಚಿಸುವ ಕ್ರೋಢೀಕೃತ ಮಾಸಿಕ ಅನುಸರಣಾ ಮತ್ತು ಪರಿಶೀಲನಾ ವರದಿಯನ್ನು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಸರ್ಕಾರಕ್ಕೆ ಸಲ್ಲಿಸಿ, ಅದರ ಪ್ರತಿಯನ್ನು ಒಳಾಡಳಿತ ಇಲಾಖೆ ಮತ್ತು ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರಿಗೆ ಸಲ್ಲಿಸಬೇಕು.













