(ನ್ಯೂಸ್ ಕಡಬ) newskadaba.com, ಜು.08 ವಿಟ್ಲ: ಕರ್ನಾಟಕದ ಪಶ್ಚಿಮ ಘಟ್ಟಗಳ ಜೀವವೈವಿಧ್ಯಕ್ಕೆ ಮತ್ತೊಂದು ಅಪರೂಪದ ಸೇರ್ಪಡೆಯಾಗಿದೆ. ಭಾರತದ ಏಕೈಕ ನೈಜ ಮರವಾಸಿ ಸಿಹಿನೀರಿನ ಏಡಿ ಪ್ರಭೇದವಾದ ‘ಕನಿ ಮರನಂಡು’ ಮೊದಲ ಬಾರಿಗೆ ಆಗುಂಬೆಯಲ್ಲಿ ಪತ್ತೆಯಾಗಿದೆ. ಇದುವರೆಗೆ ಕೇರಳದ ಆಗಸ್ತ್ಯಮಲೆ ಜೈವಿಕ ವಲಯಕ್ಕೆ ಮಾತ್ರ ಸೀಮಿತವಾಗಿದ್ದ ಈ ಪ್ರಭೇದ, ಇದೀಗ ಕರ್ನಾಟಕದಲ್ಲೂ ಇರುವುದು ಸಂಶೋಧಕರಾದ ಜೋಯೆಲ್ ಕೊರೆಯ, ಪವನ್ ಚಿಕ್ಕನಾರಾಯಣಸ್ವಾಮಿ ಹಾಗೂ ವಿಜಯ್ ಕುಮಾರ್ ಅವರ ಅಧ್ಯಯನದಿಂದ ದೃಢಪಟ್ಟಿದೆ.
‘ಗೆಕಾರ್ಸಿನುಸಿಡೆ’ ಕುಟುಂಬಕ್ಕೆ ಸೇರಿದ ಈ ಏಡಿ, ಸಂಪೂರ್ಣವಾಗಿ ಮರಗಳಲ್ಲೇ ವಾಸಿಸುವ ಭಾರತದ ಏಕೈಕ ಪ್ರಭೇದವಾಗಿದೆ.ಉದ್ದವಾದ ಕಾಲುಗಳು, ಅಂಡಾಕಾರದ ಕವಚ, ಹಳದಿ-ಕಿತ್ತಳೆ ಬಣ್ಣದ ಕೊಕ್ಕು ಹಾಗೂ ನೀಲಿ-ಕಪ್ಪು ಬಣ್ಣದ ದೇಹವನ್ನು ಹೊಂದಿದೆ.ನಿತ್ಯಹರಿದ್ವರ್ಣ ಕಾಡುಗಳ ಮರಗಳ ಕಾಂಡದಲ್ಲಿರುವ ನೀರು ತುಂಬಿದ ಕುಳಿಗಳಲ್ಲಿ ಇವು ಜೀವಿಸುತ್ತವೆ. ಎಲೆಗಳು, ಬೀಜಗಳು ಹಾಗೂ ಸಣ್ಣ ಕೀಟಗಳು ಇವುಗಳ ಮುಖ್ಯ ಆಹಾರ.
ಇದುವರೆಗೆ ಸಂಪೂರ್ಣ ಮರವಾಸಿ ಎಂದುಕೊಳ್ಳಲಾಗಿದ್ದ ಈ ಏಡಿಗಳು, ಆಗುಂಬೆಯ ಮೈರಿಸ್ಟಿಕಾ ಜೌಗು ಪ್ರದೇಶದ ಬಳಿ ನೆಲದ ಮೇಲೂ ಸಂಚರಿಸುತ್ತಿರುವುದು ಕಂಡುಬಂದಿದೆ. ಮಳೆಗಾಲದಲ್ಲಿ ಸಂಗಾತಿಯ ಹುಡುಕಾಟ ಅಥವಾ ಹೊಸ ವಾಸಸ್ಥಳದ ಅನ್ವೇಷಣೆಗಾಗಿ ಇವು ನೆಲಕ್ಕಿಳಿಯುತ್ತವೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ.
ಪಶ್ಚಿಮ ಘಟ್ಟಗಳ ಜೀವವೈವಿಧ್ಯ ಅಧ್ಯಯನಕ್ಕೆ ಈ ಶೋಧನೆ ಮಹತ್ವದ ಕೊಡುಗೆಯಾಗಿದ್ದು, ಈ ಪ್ರಭೇದದ ಸಂರಕ್ಷಣೆ ಮತ್ತು ನಡವಳಿಕೆಯ ಕುರಿತು ಹೆಚ್ಚಿನ ವೈಜ್ಞಾನಿಕ ಸಮೀಕ್ಷೆಯ ಅಗತ್ಯವಿದೆ ಎಂದು ಸಂಶೋಧಕರು ಶಿಫಾರಸು ಮಾಡಿದ್ದಾರೆ.









