(ನ್ಯೂಸ್ ಕಡಬ) newskadaba.com ಜು. 07.ಕೊಡಗಿನ ಮಲ್ಲಳ್ಳಿ ಜಲಪಾತದಲ್ಲಿ ಒಂದು ಕ್ಷಣದ ಹುಚ್ಚಾಟ, ಇಡೀ ಜೀವವನ್ನೇ ಪಣಕ್ಕಿಟ್ಟ ಘಟನೆ ನಡೆದಿದೆ. ಕೇವಲ ಫೋಟೋ ಮತ್ತು ಸೆಲ್ಫಿಗಾಗಿ ಜಲಪಾತದ ರೌದ್ರ ರೂಪದ ನಡುವೆಯೇ ನುಗ್ಗಿದ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು, ಸಾವಿನ ದವಡೆಗೆ ಸಿಲುಕಿ ಕೊನೆಗೂ ಅಗ್ನಿಶಾಮಕ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಪಾರಾಗಿದ್ದಾರೆ.
ಮೂಲತಃ ಆಂಧ್ರಪ್ರದೇಶದವರಾದ, ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಂತೋಷ್ ಕುಮಾರ್ ಮತ್ತು ಗಣೇಶ್ ನಾಯಕ್ ಎಂಬ ಇಬ್ಬರು ವಿದ್ಯಾರ್ಥಿಗಳು ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತಕ್ಕೆ ಪ್ರವಾಸಕ್ಕೆ ಬಂದು, ಮಳೆಗಾಲದ ರಭಸದ ನಡುವೆಯೂ ಅಪಾಯಕಾರಿ ಬಂಡೆಗಳ ಮೇಲೆ ನಿಂತು ಫೋಟೋ ಹಾಗೂ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಮೇಲ್ಭಾಗದ ವಿದ್ಯುತ್ ಉತ್ಪಾದನಾ ಘಟಕದಿಂದ ಏಕಾಏಕಿ ಹೆಚ್ಚಿನ ಪ್ರಮಾಣದ ನೀರನ್ನು ಹರಿಬಿಡಲಾಯಿತು. ಕೇವಲ ಒಂದು ನಿಮಿಷದಲ್ಲಿ ನೀರಿನ ಮಟ್ಟ ಭೀಕರವಾಗಿ ಹೆಚ್ಚಿದ್ದರಿಂದ, ವಿದ್ಯಾರ್ಥಿಗಳು ಜಲದಿಗ್ಬಂಧನಕ್ಕೆ ಸಿಲುಕಿ ದಾರಿ ಕಾಣದೆ ಕಿರುಚಾಡಲು ಆರಂಭಿಸಿದರು.
ತಕ್ಷಣವೇ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಭೋರ್ಗರೆಯುವ ನೀರಿನ ನಡುವೆ ಹಗ್ಗದ ಸಹಾಯದಿಂದ ಬಂಡೆಯನ್ನು ತಲುಪಿ, ಯುವಕರಿಬ್ಬರನ್ನು ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ದಡಕ್ಕೆ ಕರೆತಂದರು. ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ದೊಡ್ಡ ಗಂಡಾಂತರವೊಂದು ತಪ್ಪಿದಂತಾಗಿದೆ.













