(ನ್ಯೂಸ್ ಕಡಬ) newskadaba.com, ಜು.07 : ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿ ಇಂಡೋನೇಷ್ಯಾಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಬಿಂಟಾಂಗ್ ಆದಿಪೂರ್ಣ’ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಜಕಾರ್ತಾದ ಇಸ್ತಾನಾ ಮೆರ್ಡೆಕಾ ಅಧ್ಯಕ್ಷೀಯ ಭವನದಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
1959ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಯು ಇಂಡೋನೇಷ್ಯಾದ ಅತ್ಯುನ್ನತ ಗೌರವವಾಗಿದ್ದು, ರಾಷ್ಟ್ರದ ಏಕತೆ, ಸ್ಥಿರತೆ ಮತ್ತು ಸಮೃದ್ಧಿಗೆ ಅಸಾಧಾರಣ ಕೊಡುಗೆ ನೀಡಿದ ನಾಗರಿಕರು ಹಾಗೂ ಸೇನಾ ಸಿಬ್ಬಂದಿಗೆ ನೀಡಲಾಗುತ್ತದೆ.ಪ್ರಶಸ್ತಿ ಪ್ರದಾನಕ್ಕೂ ಮುನ್ನ ಪ್ರಧಾನಿ ಮೋದಿಗೆ ಅದ್ಧೂರಿ ಔಪಚಾರಿಕ ಸ್ವಾಗತ ದೊರೆಯಿತು. ಬಳಿಕ ಉಭಯ ನಾಯಕರ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಿತು.
ಈ ಪ್ರವಾಸವು ಭಾರತದ ‘ಆ್ಯಕ್ಟ್ ಈಸ್ಟ್’ ನೀತಿ, ‘ಮಹಾಸಾಗರ್’ (MAHASAGAR) ದೃಷ್ಟಿಕೋನ ಹಾಗೂ ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶದ ಬದ್ಧತೆಯನ್ನು ಬಲಪಡಿಸುವ ಉದ್ದೇಶ ಹೊಂದಿದೆ.ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ಹೊಸ ಸಹಕಾರಕ್ಕೆ ದಾರಿ ಮಾಡಿಕೊಡಲು ಈ ಭೇಟಿ ಮಹತ್ವದ ಹೆಜ್ಜೆಯಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಂದೀರ್ ಜೈಸ್ವಾಲ್ ತಿಳಿಸಿದ್ದಾರೆ.









