(ನ್ಯೂಸ್ ಕಡಬ) newskadaba.com, ಜು.07 ಬೆಳ್ತಂಗಡಿ: ಇಲ್ಲಿನ ಲಾಯಿಲ ಜಂಕ್ಷನ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಮಂಗಳೂರಿನ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಧೀರಜ್ (23) ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಸವಾರ ಗಾಯಗೊಂಡಿದ್ದಾರೆ.
ಮಂಗಳೂರಿನ ಕಾಲೇಜೊಂದರ ನಾಲ್ಕು ಮಂದಿ ವಿದ್ಯಾರ್ಥಿಗಳು ಕೊಟ್ಟಿಗೆಹಾರ ಸಮೀಪದ ದೇವರಮನೆಗೆ ಪ್ರವಾಸ ಮುಗಿಸಿ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಹೆದ್ದಾರಿಯಲ್ಲಿದ್ದ ಗುಂಡಿಯೊಂದಕ್ಕೆ ಬೈಕ್ ಬಿದ್ದು ಸ್ಕಿಡ್ ಆದ ಪರಿಣಾಮ, ಹಿಂಬದಿ ಸವಾರ ಧೀರಜ್ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಆ ಮಾರ್ಗವಾಗಿ ಚಲಿಸುತ್ತಿದ್ದ ನೀರಿನ ಟ್ಯಾಂಕರ್‌ನ ಚಕ್ರ ಧೀರಜ್ ಮೇಲಿಂದ ಹಾದುಹೋಗಿರಬಹುದು ಎಂದು ಸಹಪಾಠಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ಸೂಚನಾ ಫಲಕಗಳಿಲ್ಲದೆ ರಸ್ತೆಯುದ್ದಕ್ಕೂ ನಿರ್ಮಾಣವಾಗಿರುವ ಗುಂಡಿಗಳೇ ಈ ಘಟನೆಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.









