ಭಾರತದ ತೂಗು ಸೇತುವೆ ಮನುಷ್ಯ ‘ಪದ್ಮಶ್ರೀ ಡಾ.ಗಿರೀಶ್ ಭಾರದ್ವಾಜ್’ ವಿಧಿವಶ



(ನ್ಯೂಸ್ ಕಡಬ) newskadaba.com ಸುಳ್ಯ, ಜು. 07. ತೂಗು ಸೇತುವೆಗಳ ಸರದಾರ ಹಾಗೂ ಭಾರತದ ಸೇತುವೆ ಮನುಷ್ಯ ಎಂದೇ ಖ್ಯಾತಗೊಂಡಿದ್ದ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್‌ ಭಾರದ್ವಾಜ್‌ (76) ಅವರು ಮಂಗಳವಾರದಂದು ಮುಂಜಾನೆ ನಿಧನ ಹೊಂದಿದ್ದಾರೆ.







 

ತೀವ್ರ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆದರೆ, ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ ಉಷಾ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.






ಡಾ.ಗಿರೀಶ್‌ ಭಾರದ್ವಾಜ್‌ ಅವರು 1950ರ ಮೇ 2 ರಂದು ದಕ್ಷಿಣ ಕನ್ನಡ ಜಿಲೆಯ ಸುಳ್ಯ ತಾಲೂಕಿನ ಅರಂಬೂರಿನಲ್ಲಿ ಜನಿಸಿದರು. ಇವರು 1973 ರಲ್ಲಿ ಮಂಡ್ಯದ ಪಿ ಇ ಎಸ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದರು. ಪದವಿ ಮಾಡಿದ ತಕ್ಷಣ ಅವರು ತಮ್ಮ ತಂದೆಯ ಆಶಯದಂತೆ ಹುಟ್ಟೂರಿನಲ್ಲೇ ಉಳಿದು, ಸಣ್ಣದೊಂದು ವರ್ಕ್‌ಶಾಪ್‌ ಆರಂಭಿಸಿ ಕೆಲಸ ಪ್ರಾರಂಭಿಸಿದರು.

1989 ರಲ್ಲಿ ಅರಂಬೂರು ಗ್ರಾಮದ ಜನರಿಗೆ ಸುಳ್ಯ ಪಟ್ಟಣದ ಜೊತೆ ಸಂಪರ್ಕ ಸಾಧಿಸಲು ಪಯಸ್ವಿನಿ ನದಿಯೇ ಅಡ್ಡಲಾಗಿತ್ತು. ಮಳೆಗಾಲದಲ್ಲಂತೂ ಹಳ್ಳಿಯಂತೂ ಸಂಪೂರ್ಣ ದ್ವೀಪದಂತಾಗುತ್ತಿತ್ತು. ಅಲ್ಲಿ ಒಂದು ಸೇತುವೆ ನಿರ್ಮಿಸಿಕೊಂಡುವಂತೆ ಸ್ಥಳೀಯರು ಗಿರೀಶ್‌ ಅವರ ಬಳಿ ವಿನಂತಿಸಿದರು. ಆವಾಗ ಬಂದದ್ದೇ ʼತೂಗು ಸೇತುವೆʼ ಕಲ್ಪನೆ.

 

ಇದಾದ ನಂತರ ಗಿರೀಶ್‌ ಭಾರಧ್ವಾಜ್‌ ಅವರ ಹೆಸರು ದೇಶದಾದ್ಯಂತ ಖ್ಯಾತಿಯನ್ನು ಪಡೆಯಿತು. ನದಿ, ಕೊಳ್ಳ, ಹಳ್ಳದಿಂದಾಗಿ ಮುಖ್ಯವಾಹಿನಿಯಿಂದ ಸಂಪರ್ಕ ಕಳೆದುಕೊಂಡ ನೂರಾರು ಪ್ರದೇಶಗಳಿಗೆ ಇವರು ಆಶಾಕಿರಣರಾದರು. ಕರ್ನಾಟಕ, ಕೇರಳ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಸ್ಥಳೀಯ ಸಂಪನ್ಮೂಲ ಬಳಸಿ, ಅತ್ಯಂತ ಕಡಿಮೆ ವೆಚ್ಚದಲ್ಲಿ ತೂಗು ಸೇತುವೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇವರು ದೇಶಾದ್ಯಂತ 160 ಕ್ಕೂ ಹೆಚ್ಚು ತೂಗು ಸೇತುವೆಗಳನ್ನು ನಿರ್ಮಾಣ ಮಾಡಿದ್ದಾರೆ.

error: Content is protected !!
Scroll to Top