(ನ್ಯೂಸ್ ಕಡಬ) newskadaba.com, ಜು.03 ಮೆಸೇಜಿಂಗ್ ಆ್ಯಪ್‌ಗಳ ‘ಯೂಸರ್‌ನೇಮ್’ ವೈಶಿಷ್ಟ್ಯದ ಭದ್ರತೆಗೆ ಸಂಬಂಧಿಸಿದಂತೆ ವಾಟ್ಸಾಪ್‌ಗೆ ನೋಟಿಸ್ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಟೆಲಿಗ್ರಾಂ ಮತ್ತು ಸಿಗ್ನಲ್ ಸಂಸ್ಥೆಗಳಿಗೂ ನೋಟಿಸ್ ಜಾರಿ ಮಾಡಿದೆ.ಯೂಸರ್‌ನೇಮ್ ಆಧಾರಿತ ಖಾತೆ ವ್ಯವಸ್ಥೆ, ಅದರ ಭದ್ರತಾ ಕ್ರಮಗಳು ಹಾಗೂ ದುರುಪಯೋಗ ತಡೆಗೆ ಕೈಗೊಂಡಿರುವ ತಾಂತ್ರಿಕ ಕ್ರಮಗಳ ಬಗ್ಗೆ ವಿವರವಾದ ವರದಿ ಸಲ್ಲಿಸಲು ಸರ್ಕಾರ ಆದೇಶಿಸಿದೆ.
ಫೋನ್ ಸಂಖ್ಯೆ ಇಲ್ಲದೆ ಕೇವಲ ಯೂಸರ್‌ನೇಮ್ ಮೂಲಕ ಸಂಪರ್ಕಿಸುವ ವ್ಯವಸ್ಥೆಯಿಂದ ನಕಲಿ ಖಾತೆಗಳ ಸೃಷ್ಟಿ, ಫಿಶಿಂಗ್, ಆನ್‌ಲೈನ್ ವಂಚನೆ ಹಾಗೂ ಇತ್ತೀಚೆಗೆ ಹೆಚ್ಚುತ್ತಿರುವ ‘ಡಿಜಿಟಲ್ ಅರೆಸ್ಟ್’ ನಂತಹ ಸೈಬರ್ ಅಪರಾಧಗಳು ಹೆಚ್ಚಾಗಬಹುದು ಎಂದು ಸರ್ಕಾರ ಕಳವಳ ವ್ಯಕ್ತಪಡಿಸಿದೆ.ಟೆಲಿಗ್ರಾಂನಲ್ಲಿ ಈಗಾಗಲೇ ಈ ಸೌಲಭ್ಯವಿದ್ದು, ಸಿಗ್ನಲ್‌ನಲ್ಲಿ ಇದು ಐಚ್ಛಿಕವಾಗಿದೆ.
ನಿಯಂತ್ರಣಾತ್ಮಕ ಬದಲಾವಣೆಗಳ ಹಿನ್ನೆಲೆಯಲ್ಲಿ ಜೋಹೋ ಸಂಸ್ಥೆಯು ತನ್ನ ‘ಅರಟ್ಟೈ’ ಆ್ಯಪ್‌ನ ಯೂಸರ್‌ನೇಮ್ ಫೀಚರ್ ಅನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಇನ್ನೊಂದೆಡೆ, ಸಾರ್ವಜನಿಕ ಗಣ್ಯರ ಹೆಸರಿನ ದುರುಪಯೋಗ ತಡೆಯಲು ಹಾಗೂ ನಕಲಿ ಖಾತೆ ಪತ್ತೆಹಚ್ಚಲು ಹಲವು ಹಂತದ ಭದ್ರತಾ ವ್ಯವಸ್ಥೆ ರೂಪಿಸಿರುವುದಾಗಿ ವಾಟ್ಸಾಪ್ ತಿಳಿಸಿದೆ.









