(ನ್ಯೂಸ್ ಕಡಬ) newskadaba.com ಜು. 03. ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಕ್ರೀಡೆ ಆಯೋಜಿಸುವುದಕ್ಕೆ ಕೆಲವೊಂದು ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.
ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ನಡೆದ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ, ಕಂಬಳ ಆಯೋಜನೆಯ ಸಾಧಕ-ಬಾಧಕಗಳ ಬಗ್ಗೆ, ಚರ್ಚಿಸಲಾಯಿತು. ಕಂಬಳ ಕ್ರೀಡೆಯ ಆಯೋಜನೆ ವಿರುದ್ಧ ವಿವಿಧ ಹಂತದ ಕಾರ್ಯಕ್ರಮ ರೂಪಿಸಲು ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಕ್ರಿಯಾ ಸಮಿತಿ ರಚಿಸಲು ನಿರ್ಣಯಿಸಲಾಯಿತು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ದಸರಾ ಮಹೋತ್ಸವದಲ್ಲಿ ಮೈಸೂರಿನಲ್ಲಿ ಕಂಬಳ ಆಯೋಜನೆ ಸರಿಯಲ್ಲ. ಇದು ಕರಾವಳಿ ಭಾಗದ ಜನಪ್ರಿಯ ಗ್ರಾಮೀಣ ಕ್ರೀಡೆಯಾಗಿದ್ದು, ಇದಕ್ಕೆ ಆ ನೆಲದ ಪ್ರಾದೇಶಿಕ ವೈಶಿಷ್ಟ್ಯತೆ ಇದೆ. ಅದನ್ನು ವಾಣಿಜ್ಯದ ಉದ್ದೇಶದಿಂದ ಮೈಸೂರಿನಲ್ಲಿ ನಡೆಸುವುದನ್ನು ನಾವೆಲ್ಲ ವಿರೋಧಿಸೋಣ, ಕಂಬಳ ನಡೆಯದಂತೆ ತಡೆಯೋಣ ಎಂದು ಹೇಳಿದರು.
ರೈತ ಮುಖಂಡ ಮಂಜು ಕಿರಣ್, ‘ಈ ಹೋರಾಟಕ್ಕೆ ನಮ್ಮ ಬೆಂಬಲವಿದೆ’ ಎಂದು ತಿಳಿಸಿದರು. ‘ಕಂಬಳಕ್ಕಾಗಿ ಈಗ ನಡೆಯುತ್ತಿರುವ ಸಿದ್ಧತೆಗಳನ್ನು ನಿಲ್ಲಿಸಲು ತಕ್ಷಣ ಕಾರ್ಯೋನ್ಮುಖರಾಗುವ ಅಗತ್ಯವಿದೆ’ ಎಂದು ನಿವೃತ್ತ ಮೇಜರ್ ಜನರಲ್ ಎಸ್.ಜಿ. ಒಂಬಲ್ಕೆರೆ ಹೇಳಿದರು.
ಶಿಕ್ಷಣ ತಜ್ಞ ಪ್ರೊ|ನಬಿಜಾನ್, ರೈತ ಸಂಘದ ಮೈಸೂರು ವಿಭಾಗದ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಕನ್ನಡ ಕ್ರಿಯಾ ಸಮಿತಿಯ ಸಿದ್ದೇಗೌಡ, ಕನ್ನಡ ಪರ ಹೋರಾಟಗಾರ ಶ್ರೀನಿವಾಸ ಮಿತ್ರ, ಟೀಮ್ ಮೈಸೂರಿನ ಗೋಕುಲ್ ಗೋವರ್ಧನ್, ಪರಿಸರಕ್ಕಾಗಿ ನಾವು ಸಂಘಟನೆಯ ಲೀಲಾ ಶಿವಕುಮಾರ್, ಅಂಜನಾ, ಪ್ರಭಾ, ಸ್ವಪ್ನಾ, ಗಾಯತ್ರಿ, ಸುಮಲತಾ, ಗಣೇಶ್, ಸದಾನಂದಯ್ಯ, ರವಿ ಬಳೆ, ರಾಮಸ್ವಾಮಿ, ಪ್ರಗತಿಪರ ಹೋರಾಟಗಾರ ಉಗ್ರನರಸಿಂಹೇಗೌಡ, ವಕೀಲರಾದ ಐಶ್ವರ್ಯಾ, ಕೃಷ್ಣ, ಉಮೇಶ್ ಗೌಡ, ರಾಮು, ಪ್ರಭಾಕರ್ ಮೊದಲಾದವರು ಪಾಲ್ಗೊಂಡಿದ್ದರು.













