(ನ್ಯೂಸ್ ಕಡಬ) newskadaba.com, ಜು.01: ಕಬಕ ಜಂಕ್ಷನ್ ಬಳಿ ನಿಯಮಬಾಹಿರವಾಗಿ ತಡರಾತ್ರಿವರೆಗೆ ತೆರೆದಿದ್ದ ಹೋಟೆಲ್ ಮುಚ್ಚುವಂತೆ ಸೂಚಿಸಿದ ಗಸ್ತು ಪೊಲೀಸರೊಂದಿಗೆ ಗ್ರಾಹಕರೊಬ್ಬರು ವಾಗ್ವಾದ ನಡೆಸಿದ ಘಟನೆಗೆ ಸಂಬಂಧಿಸಿ, ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಜೂನ್ 18ರ ತಡರಾತ್ರಿ 1:30ರ ಸುಮಾರಿಗೆ ಮೊಹಮ್ಮದ್ ಆಸಿಫ್ ಮಾಲೀಕತ್ವದ ‘ಕೆಎಸ್ ಅಲ್ಫಾ ಕಾರ್ನರ್’ ಹೋಟೆಲ್ ನಿಯಮ ಮೀರಿ ತೆರೆದಿರುವುದನ್ನು ಗಮನಿಸಿದ ಪೊಲೀಸರು ಅದನ್ನು ಮುಚ್ಚಲು ಸೂಚಿಸಿದರು. ಈ ವೇಳೆ ಹೋಟೆಲ್ನಲ್ಲಿದ್ದ ಗ್ರಾಹಕ, ಕಬಕ ನಿವಾಸಿ ಉಜ್ವಲ್ ಕುಮಾರ್ ಪ್ರಭು (45) ಎಂಬಾತ ಪೊಲೀಸರೊಂದಿಗೆ ತಕರಾರು ತೆಗೆದು ವಾಗ್ವಾದ ನಡೆಸಿದ್ದಾನೆ. ಇವನ ವಿರುದ್ಧ ಈ ಹಿಂದೆ ಕೂಡ ಎರಡು ಪ್ರಕರಣಗಳು ದಾಖಲಾಗಿದ್ದವು. ಇನ್ನು ಪರವಾನಿಗೆ ಅವಧಿ ಮುಗಿದ ಬಳಿಕವೂ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಹೋಟೆಲ್ ಅನ್ನು ಮುಚ್ಚಿಸಲಾಗಿದೆ.
ಘಟನೆ ನಡೆದು ವಾರ ಕಳೆದರೂ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡದ ಹಾಗೂ ಪರಿಸ್ಥಿತಿಯನ್ನು ವೃತ್ತಿಪರವಾಗಿ ನಿಭಾಯಿಸಲು ವಿಫಲರಾದ ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಪಿಎಸ್ಐ) ಸುರೇಶ್ ಅವರಿಗೆ ಮೇಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.









