(ನ್ಯೂಸ್ ಕಡಬ) newskadaba.com, ಜು.01: ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ (PA) ಸಂದೀಪ್ ಸಾಲಿಯನ್ (40) ಅವರು ಗೋವಾದ ಕಲ್ಲಂಗೂಟ್ ಬೀಚ್ ಬಳಿಯ ಅತಿಥಿ ಗೃಹವೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಉಡುಪಿ ಜಿಲ್ಲೆಯ ಮಲ್ಪೆ ಮೂಲದವರಾದ ಸಂದೀಪ್ ಸಾಲಿಯನ್, ಹಲವು ವರ್ಷಗಳ ಹಿಂದೆಯೇ ಆಪ್ತ ಸಹಾಯಕ ಕೆಲಸವನ್ನು ತೊರೆದಿದ್ದರು. ಪ್ರಸ್ತುತ ಅವರು ಪ್ರವಾಸೋದ್ಯಮ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಮಲ್ಪೆಯಲ್ಲಿ ಪ್ರವಾಸಿ ದೋಣಿಯೊಂದನ್ನು ಹೊಂದಿದ್ದರು.
ಮೂರು ದಿನಗಳ ಹಿಂದೆ ಪ್ರವಾಸಕ್ಕಾಗಿ ಗೋವಾಕ್ಕೆ ತೆರಳಿದ್ದ ಸಂದೀಪ್ ಮಂಗಳವಾರ ಸಾವನ್ನಪ್ಪಿದ್ದಾರೆ. ಇವರ ಹಠಾತ್ ಸಾವು ಹೃದಯಾಘಾತದಿಂದ ಸಂಭವಿಸಿದೆಯೇ ಅಥವಾ ಇದರ ಹಿಂದೆ ಕೊಲೆ ಸಂಚು ಇದೆಯೇ ಎಂಬ ಬಗ್ಗೆ ತೀವ್ರ ಸಂಶಯ ಹಾಗೂ ಕಳವಳ ವ್ಯಕ್ತವಾಗಿದೆ.
ಮರಣಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾಗಿದ್ದು, ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ.









