(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು. 01. ಕಳೆದ ಮಾರ್ಚ್ ತಿಂಗಳಿನಲ್ಲಿ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದ ನವ ವಿವಾಹಿತ ಸುದೀಪ್ ರೈ ನೆಲ್ಯಾಡಿ ಅವರ ಆತ್ಮಹತ್ಯೆ ಪ್ರಕರಣದ ಆರೋಪಿ ಸೌಮ್ಯ ಶೆಟ್ಟಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಬೆಳ್ತಂಗಡಿಯಲ್ಲಿ ಉದ್ಯಮಿಯಾಗಿದ್ದ ಕಡಬ ತಾಲೂಕಿನ ನೆಲ್ಯಾಡಿಯ ಸುದೀಪ್ ರೈ ಆತ್ಮಹತ್ಯೆ ಗೆ ಪತ್ನಿ ಸೌಮ್ಯ ಶೆಟ್ಟಿ ನೀಡಿರುವ ಮಾನಸಿಕ ಕಿರುಕುಳ ಹಾಗೂ ಆತ್ಮಹತ್ಯೆ ಪ್ರಚೋದನೆಯೇ ಕಾರಣ ಎಂದು ಪ್ರಕರಣ ದಾಖಲಾಗಿತ್ತು. ಸುದೀಪ್ ರೈ ಅವರ ತಂದೆ ಬಿ.ದಾಮೋದರ ರೈ ಅವರು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಗಂಭೀರತೆಯನ್ನು ಅರಿತ ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಆದೇಶದ ಮೇರೆಗೆ ಪ್ರಕರಣವನ್ನು ಕೈಗೆತ್ತಿಕೊಂಡ ಕಾರ್ಕಳ ನಗರ ಠಾಣೆಯ ಪೊಲೀಸರು ಸೌಮ್ಯ ಶೆಟ್ಟಿಯನ್ನು ಏಪ್ರಿಲ್ 11ರಂದು ಉಡುಪಿಯಲ್ಲಿ ಬಂಧಿಸಿದ್ದರು. ಸೌಮ್ಯ ಶೆಟ್ಟಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಏ. 30ರಂದು ಉಡುಪಿ ಜಿಲ್ಲಾ ನ್ಯಾಯಾಲಯ ತಿರಸ್ಕೃತಗೊಳಿಸಿತ್ತು.
ಇದೀಗ ರಾಜ್ಯ ಉಚ್ಚ ನ್ಯಾಯಾಲಯ ಕೂಡಾ ಸೌಮ್ಯ ಶೆಟ್ಟಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ತಿರಸ್ಕಾರ ಮಾಡಿದ್ದು, ಪ್ರಕರಣದಲ್ಲಿ ಆರೋಪಿಯನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ. ಸೌಮ್ಯ ಶೆಟ್ಟಿಯ ವಿರುದ್ದ ಚಾರ್ಜ್ ಶೀಟ್ ಈಗಾಗಲೇ ಸಲ್ಲಿಕೆಯಾಗಿದ್ದು, ಆಕೆಯ ವಿರುದ್ದ ಹಲವಾರು ಸಾಕ್ಷಿಗಳು ಹಾಗೂ ದಾಖಲೆಗಳು ದೊರೆತಿವೆ ಎಂಬ ಮಾಹಿತಿಯಿದೆ. ದೂರುದಾರ ದಾಮೋದರ ರೈ ಪರವಾಗಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾದ ಚಿದಾನಂದ ಮಾಣಿ ಹಾಗೂ ಹೆಚ್.ಎನ್.ಸಮೀರ್ ಬೆಂಗಳೂರು ವಾದಿಸಿದ್ದರು.









