ಮಂಗಳೂರು ದರೋಡೆ ಪ್ರಕರಣ: ಬಂಟ್ವಾಳದಲ್ಲಿ ಪತ್ತೆಯಾಯ್ತು ಆಭರಣ ವ್ಯಾಪಾರಿಯ ಕಾರು, ಸೀಟ್ ಕವರ್‌ಗಳು ಚಿಂದಿ!



(ನ್ಯೂಸ್‌ ಕಡಬ) newskadaba.com,   ಜು.01:ಮಂಗಳೂರಿನ ಬೈಕಂಪಾಡಿ ಬಳಿ ಸೋಮವಾರ ಬೆಳಗಿನ ಜಾವ ಆಭರಣ ವ್ಯಾಪಾರಿಯೊಬ್ಬರನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ವ್ಯಾಪಾರಿಯಿಂದ ಕದ್ದಿದ್ದ ಕಾರು ಬಂಟ್ವಾಳದ ಬೆಂಜನಪದವಿನಲ್ಲಿ ಪತ್ತೆಯಾಗಿದೆ. ಆದರೆ, ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ.







ಕಾರಿನ ಸೀಟುಗಳ ಒಳಗೆ ಚಿನ್ನ ಅಥವಾ ಬೆಲೆಬಾಳುವ ವಸ್ತುಗಳನ್ನು ಬಚ್ಚಿಟ್ಟಿರಬಹುದು ಎಂಬ ಶಂಕೆಯಿಂದ ದರೋಡೆಕೋರರು ಕಾರಿನ ಸೀಟ್ ಕವರ್‌ಗಳನ್ನು ಸಂಪೂರ್ಣವಾಗಿ ಹರಿದು ಹಾಕಿರುವುದು ಪೊಲೀಸರ ಪರಿಶೀಲನೆ ವೇಳೆ ಕಂಡುಬಂದಿದೆ.ದರೋಡೆಗೊಳಗಾದ ವ್ಯಾಪಾರಿಯ ಮೊಬೈಲ್ ಫೋನ್ ಇನ್ನೂ ಪತ್ತೆಯಾಗಿಲ್ಲ. ಅದು ಸ್ವಿಚ್ ಆಫ್ ಆಗಿರುವುದರಿಂದ ಆರೋಪಿಗಳು ಅದನ್ನು ನಾಶಪಡಿಸಿರುವ ಸಾಧ್ಯತೆಯಿದ್ದು, ಟವರ್ ಡಂಪ್ ಆಧರಿಸಿ ಪತ್ತೆ ಹಚ್ಚಲಾಗುತ್ತಿದೆ.






ಕೃತ್ಯಕ್ಕೆ ಬಳಸಲಾದ ಕಾರುಗಳ ನೋಂದಣಿ ಸಂಖ್ಯೆ ನಕಲಿಯಾಗಿರುವ ಶಂಕೆಯಿದ್ದು, ಆರ್‌ಟಿಒ ದಾಖಲೆಗಳು, ಕಾರು ಬಾಡಿಗೆ ಏಜೆನ್ಸಿಗಳು ಮತ್ತು ಸೆಕೆಂಡ್ ಹ್ಯಾಂಡ್ ಡೀಲರ್‌ಗಳಿಂದ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ… ಬೆಳಗಿನ ಜಾವ 2:30ರ ಸುಮಾರಿಗೆ 3ಕಾರುಗಳಲ್ಲಿ ಬಂದ ಮಾಸ್ಕ್ ಧರಿಸಿದ್ದ ದರೋಡೆಕೋರರು, ಆಭರಣ ವ್ಯಾಪಾರಿಯನ್ನು ತಡೆದು ಕಾರು, ಸುಮಾರು 180 ಗ್ರಾಂ ಚಿನ್ನಾಭರಣ, ನಗದು ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದರು. ಸದ್ಯ ಬೈಕಂಪಾಡಿ ಮತ್ತು ಪಣಂಬೂರು ಪ್ರದೇಶಗಳಲ್ಲಿ ರಾತ್ರಿ ಗಸ್ತು ತೀವ್ರಗೊಳಿಸಲಾಗಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

error: Content is protected !!
Scroll to Top