ಬೆಳ್ತಂಗಡಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಇಬ್ಬರು ಬಾಲಕರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು



(ನ್ಯೂಸ್‌ ಕಡಬ) newskadaba.com,  ಜೂ.25 ಬೆಳ್ತಂಗಡಿ: ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಇಬ್ಬರು ಅಪ್ರಾಪ್ತ ಬಾಲಕರು ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಮುಖದ್ದಮೆ ದಾಖಲಾಗಿದೆ.







ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಈ ಲೈಂಗಿಕ ದೌರ್ಜನ್ಯವು 2023ರಲ್ಲಿ ನಡೆದಿದೆ. ಇಬ್ಬರು ಅಪ್ರಾಪ್ತ ಬಾಲಕರು ಜೊತೆಗೂಡಿ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಷಯವು ಸಂತ್ರಸ್ತ ಬಾಲಕಿಯ ಮನೆಯವರಿಗೆ ತಡವಾಗಿ ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಜೂನ್ 23ರಂದು ಬಾಲಕಿಯ ಪೋಷಕರು ವೇಣೂರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.






ದೂರಿನ ಅನ್ವಯ ಕಾರ್ಯಪ್ರವೃತ್ತರಾದ ವೇಣೂರು ಪೊಲೀಸರು ಸದ್ಯ ಇಬ್ಬರು ಆರೋಪಿಗಳಲ್ಲಿ ಓರ್ವ 16 ವರ್ಷದ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಭಾಗಿಯಾದ ಇನ್ನೊಬ್ಬ 17 ವರ್ಷದ ಬಾಲಕ ಸದ್ಯ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಸಂತ್ರಸ್ತೆಯ ಪೋಷಕರು ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (IPC) ಕಲಂ 376, 376AB, 376DB, 506 ಜೊತೆಗೆ 34 ಹಾಗೂ ಪೋಕ್ಸೋ (POCSO) ಕಾಯ್ದೆ-2012ರ ಕಲಂ 6 ರ ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

error: Content is protected !!
Scroll to Top