(ನ್ಯೂಸ್ ಕಡಬ) newskadaba.com, ಜೂ.25 ಬಂಟ್ವಾಳ: ಬಿ.ಸಿ.ರೋಡಿನ ಬಸ್ ನಿಲ್ದಾಣದ ಬಳಿ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದ್ದ ವಾಹನ ಸವಾರರ ವಿರುದ್ಧ ಬಂಟ್ವಾಳ ಟ್ರಾಫಿಕ್ ಎಸ್.ಐ. ಆದರ್ಶ್ ನೇತೃತ್ವದ ಪೊಲೀಸ್ ತಂಡ ದಿಢೀರ್ ಕಾರ್ಯಾಚರಣೆ ನಡೆಸಿದೆ. ನಿಯಮ ಉಲ್ಲಂಘಿಸಿದ ಸವಾರರಿಗೆ ದಂಡ ವಿಧಿಸುವುದರ ಜೊತೆಗೆ ಬಸ್ ಹಾಗೂ ರಿಕ್ಷಾ ಚಾಲಕರಿಗೆ ಕಠಿಣ ಎಚ್ಚರಿಕೆ ನೀಡಲಾಗಿದೆ.
ಗ್ರಾಮೀಣ ಭಾಗದ ಖಾಸಗಿ ಬಸ್ ಮತ್ತು ರಿಕ್ಷಾಗಳು ಅಡ್ಡಾದಿಡ್ಡಿ ನಿಂತು ಟ್ರಾಫಿಕ್ ಕಿರಿಕಿರಿ ಉಂಟುಮಾಡುತ್ತಿರುವ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ, ಪೊಲೀಸರು ಸ್ವತಃ ಫೀಲ್ಡಿಗಿಳಿದು ವಾಹನಗಳ ದಾಖಲೆಗಳನ್ನು ಪರಿಶೀಲಿಸಿದರು.ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 25 ಪ್ರಕರಣಗಳನ್ನು ದಾಖಲಿಸಲಾಗಿದೆ.
ಇದರಲ್ಲಿ 13 ಪ್ರಕರಣಗಳು ಕರ್ಕಶ ಹಾರ್ನ್ ಅಳವಡಿಕೆಗೆ ಸಂಬಂಧಿಸಿದ್ದಾಗಿದ್ದು, ಉಳಿದಂತೆ ನಂಬರ್ ಪ್ಲೇಟ್ ಇಲ್ಲದ ಹಾಗೂ ಕರ್ಕಶ ಶಬ್ದದ ಸೈಲೆನ್ಸರ್ ಹೊಂದಿದ್ದ ವಾಹನಗಳ ವಿರುದ್ಧ ಕ್ರಮ ಜರುಗಿಸಲಾಗಿದೆ.ಬಿ.ಸಿ.ರೋಡಿನ ಕೈಕಂಬ ಪ್ರದೇಶದಲ್ಲೂ ಅಡ್ಡಾದಿಡ್ಡಿ ವಾಹನ ಚಾಲನೆಯಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ಇದೇ ಮಾದರಿಯ ಪೊಲೀಸ್ ಕಾರ್ಯಾಚರಣೆಯನ್ನು ಅಲ್ಲಿಯೂ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.









