(ನ್ಯೂಸ್ ಕಡಬ) newskadaba.com, ಜೂ.22 ಪ್ರತಿನಿತ್ಯ ವಿಟ್ಲದಿಂದ ಮಂಗಳೂರಿಗೆ ಸಂಚರಿಸುವ ನೂರಾರು ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಸೂಕ್ತ ಬಸ್ ಸೌಕರ್ಯವಿಲ್ಲದೆ ತೀವ್ರ ತೊಂದರೆಯಾಗುತ್ತಿದ್ದು, ತಕ್ಷಣವೇ ಸರ್ಕಾರಿ ವೇಗದೂತ ಬಸ್‌ಗಳನ್ನು ಆರಂಭಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಪ್ರಸ್ತುತ ಚಾಲ್ತಿಯಲ್ಲಿರುವ ಕಪ್ಪು ನಾಮಫಲಕದ ಶಟಲ್ ಬಸ್‌ಗಳು ಹಳೆಯದಾಗಿದ್ದು, ವಿಟ್ಲದಿಂದ ಮಂಗಳೂರು ತಲುಪಲು ಸುಮಾರು ಒಂದೂವರೆಯಿಂದ ಮುಕ್ಕಾಲು ಗಂಟೆ ತೆಗೆದುಕೊಳ್ಳುತ್ತಿವೆ.
ಬೆಳಗ್ಗಿನ ಅವಧಿಯಲ್ಲಿ ಬಸ್‌ಗಳು ವಿಟ್ಲದಿಂದ ಹೊರಡುವಾಗಲೇ ಭರ್ತಿಯಾಗುತ್ತಿದ್ದು, ಮಂಗಿಲಪದವು, ಕೆಲಿಂಜ, ವೀರಕಂಬ ತಲುಪುವಾಗ ಕಾಲಿಡಲು ಜಾಗವಿಲ್ಲದಂತಾಗುತ್ತಿವೆ. ಶೇ. 90ರಷ್ಟು ಪ್ರಯಾಣಿಕರು ನೇರವಾಗಿ ಮಂಗಳೂರಿಗೇ ತೆರಳುವವರಾಗಿದ್ದಾರೆ.ಈ ಮಾರ್ಗದಲ್ಲಿ ಸಂಚರಿಸುವ ಬಹುತೇಕ ಬಸ್‌ಗಳು ಸೀಟು, ಕಿಟಕಿ, ಬಾಗಿಲುಗಳಿಲ್ಲದೆ ಹದಗೆಟ್ಟಿದ್ದು, ಪ್ರಯಾಣದ ಮಧ್ಯದಲ್ಲೇ ಕೆಟ್ಟು ನಿಲ್ಲುತ್ತಿವೆ.
ವಿಟ್ಲ-ಪುತ್ತೂರು ಹಾಗೂ ವಿಟ್ಲ-ಮಂಗಳೂರು ಮಾರ್ಗದ ಬಸ್ ಚಾಲಕರು ಮತ್ತು ನಿರ್ವಾಹಕರ ನಡವಳಿಕೆ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಗದಿತ ನಿಲ್ದಾಣಗಳಲ್ಲಿ ಬಸ್ ನಿಲ್ಲಿಸದಿರುವುದು, ಚಿಲ್ಲರೆ ಹಣ ನೀಡಲು ಕಿರಿಕಿರಿ ಮಾಡುವುದು, ಕೆಟ್ಟ ಪದಗಳ ಬಳಕೆ ಹಾಗೂ ಆಧಾರ್ ಕಾರ್ಡ್ ಅಥವಾ ಸೀನಿಯರ್ ಸಿಟಿಜನ್ ಕಾರ್ಡ್ ತೋರಿಸುವ ಪ್ರಯಾಣಿಕರನ್ನು ತುಚ್ಛವಾಗಿ ಕಾಣುವ ವರ್ತನೆಗಳಿಗೆ ಮೇಲಧಿಕಾರಿಗಳು ತಕ್ಷಣವೇ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.









