(ನ್ಯೂಸ್ ಕಡಬ) newskadaba.com, ಜೂ.22 ಮಂಗಳೂರು: ಚಲಿಸುತ್ತಿದ್ದ ಲಾರಿಯ ಹಿಂಭಾಗಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ಜೂನ್ 21ರ ಭಾನುವಾರ ಬೆಳಿಗ್ಗೆ ಇಲ್ಲಿನ ಎಕ್ಕೂರು ರಾಷ್ಟ್ರೀಯ ಹೆದ್ದಾರಿ 66ರ ರೈಲ್ವೆ ಮೇಲ್ಸೇತುವೆಯ ಮೇಲೆ ಸಂಭವಿಸಿದೆ.
ಮೃತರನ್ನು ಮಂಜೇಶ್ವರದ ಪಾತೂರಿನ ನಿವಾಸಿ, ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಸುಧೀಶ್ ಸಿ.ಕೆ. (26) ಎಂದು ಗುರುತಿಸಲಾಗಿದೆ. ಅವರು ಮನೆಯಿಂದ ಕೆಲಸದ ನಿಮಿತ್ತ ಮಂಗಳೂರು ನಗರಕ್ಕೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.ಮೇಲ್ಸೇತುವೆಯ ಮೇಲೆ ಚಲಿಸುತ್ತಿದ್ದ ಲಾರಿಗೆ ಸುಧೀಶ್ ಅವರ ಬೈಕ್ ಹಿಂಭಾಗದಿಂದ ಬಲವಾಗಿ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು.
ಸ್ಥಳೀಯರು ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರಾದರೂ, ವಿಪರೀತ ರಕ್ತಸ್ರಾವದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.ಅತಿಯಾದ ವೇಗವೇ ಈ ಅಪಘಾತಕ್ಕೆ ಪ್ರಾಥಮಿಕ ಕಾರಣ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.









