(ನ್ಯೂಸ್ ಕಡಬ) newskadaba.com, ಜೂ.16 ಅಸ್ಸಾಂನ ಪ್ರತಿಷ್ಠಿತ ‘ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ’ ಸಿಬ್ಬಂದಿಯ ಗಂಭೀರ ನಿರ್ಲಕ್ಷ್ಯದಿಂದಾಗಿ ಎರಡು ಮೃತದೇಹಗಳು ಅದಲು-ಬದಲಾದ ಘಟನೆ ವರದಿಯಾಗಿದೆ. ಈ ಎಡವಟ್ಟು ಮೃತರ ಕುಟುಂಬಸ್ಥರಿಗೆ ತೀವ್ರ ಆಘಾತ ಹಾಗೂ ಮಾನಸಿಕ ಸಂಕಷ್ಟವನ್ನು ತಂದೊಡ್ಡಿದೆ.
ಸೋನಾರಿ ಮೂಲದ ಮನೋಜ್ ಬೌರಿ ಅವರು ಜೂನ್ 7ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಭಾನುವಾರ ಮೃತಪಟ್ಟಿದ್ದರು.ಮರಣೋತ್ತರ ಪರೀಕ್ಷೆಯ ಬಳಿಕ ಆಸ್ಪತ್ರೆ ನೀಡಿದ ಶವವನ್ನು ಪಡೆದು ಮನೆಗೆ ಕೊಂಡೊಯ್ದ ಕುಟುಂಬಸ್ಥರು, ಅಂತ್ಯಸಂಸ್ಕಾರಕ್ಕೂ ಮುನ್ನ ಶವಪೆಟ್ಟಿಗೆ ತೆರೆದಾಗ ಅದು ಮನೋಜ್ ಅವರ ದೇಹವಲ್ಲ ಎಂಬುದು ಬೆಳಕಿಗೆ ಬಂದಿದೆ.
ಆಸ್ಪತ್ರೆಯು ಮನೋಜ್ ಬೌರಿ ಅವರ ಮೃತದೇಹವನ್ನು ಡೂಮ್‌ಡೂಮಾ ನಿವಾಸಿ ಸುನಿಲ್ ನಾಯಕ್ ಅವರ ಕುಟುಂಬಕ್ಕೆ ಹಾಗೂ ಸುನಿಲ್ ಅವರ ದೇಹವನ್ನು ಮನೋಜ್ ಅವರ ಕುಟುಂಬಕ್ಕೆ ತಪ್ಪಾಗಿ ಹಸ್ತಾಂತರಿಸಿತ್ತು.ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಆಸ್ಪತ್ರೆ ಆಡಳಿತ ಹಾಗೂ ಪೊಲೀಸರು, ತಕ್ಷಣವೇ ಎರಡೂ ಕುಟುಂಬಗಳನ್ನು ಸಂಪರ್ಕಿಸಿ ಮೃತದೇಹಗಳನ್ನು ಮರಳಿ ಆಸ್ಪತ್ರೆಗೆ ತರಿಸಿಕೊಂಡಿದ್ದಾರೆ. ಸೂಕ್ತ ಗುರುತಿನ ಪರಿಶೀಲನೆಯ ನಂತರ ಶವಗಳನ್ನು ಆಯಾ ವಾರಸುದಾರರಿಗೆ ಮರು ಹಸ್ತಾಂತರಿಸಲಾಗಿದೆ.
ಇದೇ ಆಸ್ಪತ್ರೆಯಲ್ಲಿ ಈ ಹಿಂದೆಯೂ ಇಂತಹದ್ದೇ ಶವ ಗುರುತಿನ ಗೊಂದಲ ನಡೆದಿತ್ತು ಎನ್ನಲಾಗಿದ್ದು, ಆಸ್ಪತ್ರೆ ಮ್ಯಾನೇಜ್‌ಮೆಂಟ್‌ನ ನಿರಂತರ ಬೇಜವಾಬ್ದಾರಿತನದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಘಟನೆ ಕುರಿತು ಆಸ್ಪತ್ರೆಯ ಕಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.













