(ನ್ಯೂಸ್ ಕಡಬ) newskadaba.com, ಜೂ.10 ಬೆಳ್ತಂಗಡಿ: ತಾಲೂಕಿನಾದ್ಯಂತ ಮಂಗಳವಾರ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಉಜಿರೆ-ಕನ್ಯಾಡಿ ವ್ಯಾಪ್ತಿಯ ಅಂಬಡೆಬೆಟ್ಟಿನಲ್ಲಿ 2.50 ಕೋಟಿ ರೂ. ವೆಚ್ಚದ ಹೊಸ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಸಂಚಾರಕ್ಕಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಮಣ್ಣಿನ ರಸ್ತೆ ಮಳೆನೀರಿಗೆ ಕೊಚ್ಚಿಹೋಗಿದೆ.
ಅಂಬಡೆಬೆಟ್ಟು ಮಾರ್ಗ ಬಂದ್ ಆಗಿರುವುದರಿಂದ ಉಜಿರೆ, ನಾಡ, ಇಂದಬೆಟ್ಟು, ಕೊಲ್ಲಿ, ಗುರಿಪಳ್ಳ ಭಾಗದ ಸಾವಿರಾರು ಕುಟುಂಬಗಳ ಸಂಪರ್ಕ ಕಡಿತಗೊಂಡಿದೆ. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಉಜಿರೆ ತಲುಪಲು 20 ಕಿ.ಮೀ ಹೆಚ್ಚುವರಿ ಸುತ್ತಿ ಬಳಸಿ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ..
ಸೋಮಂತಡ್ಕದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೆ ರಾಷ್ಟ್ರೀಯ ಹೆದ್ದಾರಿ ಹಾಗೂ ಅಂಗಡಿಗಳಿಗೆ ನೀರು ನುಗ್ಗಿದೆ. ಬಿರುಗಾಳಿಗೆ ನೂರಾರು ಅಡಿಕೆ, ರಬ್ಬರ್ ಮರಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಹಾಗೂ ಮೊಬೈಲ್ ನೆಟ್ವರ್ಕ್ ಕಡಿತಗೊಂಡು ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಮತ್ತು ಸ್ಥಳೀಯರು ರಸ್ತೆಯ ಎರಡೂ ಕಡೆ ವಾಹನ ಸಂಚಾರವನ್ನು ನಿರ್ಬಂಧಿಸಿದ್ದಾರೆ.









