(ನ್ಯೂಸ್ ಕಡಬ) newskadaba.com, ಜೂ.05: ಕಾರಿನೊಳಗೆ ಉಸಿರುಗಟ್ಟಿ 3 ವರ್ಷದ ಮಗು ದುರ್ಮರಣ
ಕಲಬುರಗಿಯಲ್ಲಿ ಹೃದಯವಿದ್ರಾವಕ ಘಟನೆ; ಆಟವಾಡುತ್ತಿದ್ದ ಮಗು ಕಾರಿನಲ್ಲೇ ಸಿಲುಕಿ ಮೃತ್ಯು
ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ತೊನಸನಹಳ್ಳಿ (ಎಸ್) ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ಕಾರಿನೊಳಗೆ ಸಿಲುಕಿ ಉಸಿರುಗಟ್ಟಿ ಮೂರು ವರ್ಷದ ಮಗು ಮೃತಪಟ್ಟಿದೆ.
ಕೊಟ್ಟುರೇಶ್ವರ ಅವರ ಪುತ್ರ ಬಸವಪ್ರಭು ಮೃತ ಬಾಲಕನಾಗಿದ್ದಾನೆ. ಪೋಷಕರು ಮಗುವನ್ನು ಶಾಲೆಗೆ ಕರೆದುಕೊಂಡು ಹೋಗಿ ಕಾರನ್ನು ಪಾರ್ಕ್ ಮಾಡಿ ತೆರಳಿದ ವೇಳೆ, ಆಟವಾಡುತ್ತಿದ್ದ ಮಗು ಕಾರಿನೊಳಗೆ ಪ್ರವೇಶಿಸಿದೆ. ಬಳಿಕ ಕಾರಿನ ಬಾಗಿಲುಗಳು ತಾನಾಗಿಯೇ ಲಾಕ್ ಆಗಿದ್ದು, ಮಗು ಹೊರಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಬೆಳಗ್ಗಿನಿಂದಲೇ ಮಗುವಿಗಾಗಿ ಹುಡುಕಾಟ ನಡೆಸಿದ ಪೋಷಕರು, ಮಧ್ಯಾಹ್ನ ಕಾರು ತೆರೆದು ಪರಿಶೀಲಿಸಿದಾಗ ಮಗು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಘಟನೆ ಗ್ರಾಮದಲ್ಲಿ ಶೋಕದ ವಾತಾವರಣ ಮೂಡಿಸಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಬಂಧ ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.













