ಮಂಗಳೂರು : ಅರಣ್ಯ ಅಧಿಕಾರಿ ಜೀಪ್‌ ಕಳವು – ಆರೋಪಿ ಆರೆಸ್ಟ್



(ನ್ಯೂಸ್‌ ಕಡಬ) newskadaba.com, ಜೂ.04: ಪಡೀಲ್‌ನ ಅರಣ್ಯ ಇಲಾಖೆಯ ವಸತಿ ಗೃಹದ ಬಳಿ ನಿಲ್ಲಿಸಿದ್ದ ಅರಣ್ಯ ಸಂಚಾರಿದಳದ RFO ಜೀಪನ್ನು ಕದ್ದು ಕುಂದಾಪುರದತ್ತ ತೆಗೆದು ಕೊಂಡು ಹೋಗಿದ್ದ ವಿದೇಶದಲ್ಲಿ ಉದ್ಯೋದಲ್ಲಿದ್ದ ಆರೋಪಿಯನ್ನು ಕುಂದಾಪುರ ಅರಣ್ಯ ಇಲಾಖೆ ಅಧಿಕಾರಿಗಳು ಕೋಟೇಶ್ವರ ಸಮೀಪದ ಮೂಡುಗೋಪಾಡಿಯಲ್ಲಿ ಬಂಧಿಸಿದ್ದಾರೆ.







ಕೇರಳದ ಕೋಯಿಕ್ಕೋಡ್ ಜಿಲ್ಲೆಯ ನದೀಮ್ (23) ಬಂಧಿತ ಆರೋಪಿ. ಘಟನೆ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ವಿರುದ್ಧ ಈ ಹಿಂದೆ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.






ಏನಿದು ಪ್ರಕರಣ :
ಅರಣ್ಯ ಇಲಾಖೆಯ ವಸತಿ ಗೃಹದಲ್ಲಿ ಸಂಚಾರಿ ದಳದ RFO ಸಂತೋಷ್ ರೈ ಅವರ ಜೀಪನ್ನು ನಿಲ್ಲಿಸಲಾಗಿತ್ತು. ಇಲಾಖೆಯ ಜೀಪು, ಇನ್ನಿತರ ವಾಹನಗಳನ್ನು ನಿಲ್ಲಿಸಿ ಚಾಲಕರು ತಮ್ಮ ವಸತಿ ಗೃಹದಲ್ಲಿ ಉಳಿದುಕೊಂಡಿದ್ದರು. ಕೇರಳದಿಂದ ರೈಲಿನಲ್ಲಿ ಬಂದಿದ್ದ ನದೀಮ್ ಸೋಮವಾರ ಮುಂಜಾನೆ 5 ಗಂಟೆ ವೇಳೆಗೆ ವಸತಿ ಗೃಹದ ಬಳಿಗೆ ಬಂದು ಜೀಪಿನ ಗಾಜು ಒಡೆದು ಡ್ರಾವರಿನಲ್ಲಿ ಇಟ್ಟಿದ್ದ ಇನ್ನೊಂದು ಕೀಯನ್ನು ಬಳಸಿ ಕಳವು ಮಾಡಿದ್ದ. ಬೆಳಗ್ಗೆ ಚಾಲಕ ಬಂದು ನೋಡಿದಾಗ ಜೀಪ್ ನಾಪತ್ತೆಯಾಗಿತ್ತು. RFOಗೆ ಮಾಹಿತಿ ನೀಡಿದರು. ಬಳಿಕ ಜೀಪ್‌ಗೆ ಅಳವಡಿಸಿದ್ದ ಜಿಪಿಎಸ್‌ ಲೊಕೇಷನ್ ಪರಿಶೀಲಿಸಿದಾಗ ಕೋಟೇಶ್ವರದ ಮನೆಯೊಂದರ ಬಳಿ ಜೀಪ್ ನಿಲ್ಲಿಸಿರುವುದು ಕಂಡುಬಂದಿತ್ತು. ಕುಂದಾಪುರ ಭಾಗದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿ, ಜೀಪ್ ವಶಕ್ಕೆ ಪಡೆಯಲು ಸೂಚಿಸಲಾಯಿತು. ಮೂಡುಗೋಪಾಡಿ ಎಂಬಲ್ಲಿನ ಮುಖ್ಯ ರಸ್ತೆಯ ಸಮೀಪ ಮನೆಯ ಅಂಗಳದಲ್ಲಿ ಜೀಪ್ ನಿಲ್ಲಿಸಿದ ಜಾಗಕ್ಕೆ ಅರಣ್ಯ ಸಿಬಂದಿ ತೆರಳುತ್ತಿದ್ದಂತೆ ಆರೋಪಿ ಜೀಪಿನೊಂದಿಗೆ ಹೆದ್ದಾರಿಗೆ ಬಂದು ಪರಾರಿಯಾಗಲು ಯತ್ನಿಸಿದ. ಅರಣ್ಯ ಸಿಬಂದಿ ಅಡ್ಡಗಟ್ಟಿದಾಗ ಆರೋಪಿ ನದೀಮ್ ಜೀಪನ್ನು ಬಿಟ್ಟು ಓಡಲು ಯತ್ನಿಸುತ್ತಿದ್ದಂತೆ ಸಿಬಂದಿ ವಶಕ್ಕೆ ಪಡೆದರು.

ಪೆಟ್ರೋಲ್ ಪಂಪ್ ಸಿಬ್ಬಂದಿ ದೂರು:
ಆರೋಪಿ ಕೂಳೂರು ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿಕೊಂಡಿದ್ದು ಅಲ್ಲಿ ಹಣ ಕೊಡದೆ ತೆರಳಿದ್ದ. ನಸುಕಿನಲ್ಲಿ ಘಟನೆ ನಡೆದಿದ್ದರಿಂದ ಪೆಟ್ರೋಲ್ ಪಂಪ್ ಸಿಬಂದಿ ಬಳಿಕ ಸಿಸಿಟಿವಿ ಪರಿಶೀಲಿಸಿ ಜೀಪು ನಂಬರ್ ಸಹಿತ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಶೋಧ ನಡೆಸಿದಾಗ ಅರಣ್ಯ ಸಂಚಾರಿ ದಳದ ಜೀಪ್ ಎಂದು ತಿಳಿದುಬಂದಿತ್ತು.

ವಿದೇಶದಲ್ಲಿ ಉದ್ಯೋಗದಲ್ಲಿದ್ದ ಆರೋಪಿ :
ವಿದೇಶದಲ್ಲಿ ಉದ್ಯೋಗದಲ್ಲಿದ್ದ ನದೀಮ್‌ ನಾಲ್ಕು ತಿಂಗಳ ಹಿಂದೆ ತನ್ನ ಊರಿಗೆ ಬಂದಿದ್ದ. ಬಳಿಕ ಊರಲ್ಲೇ ಉಳಿಯಲು ನಿರ್ಧರಿಸಿದ ಆತ ಕೆಲವು ಸಮಯದ ಹಿಂದೆ ಬೆಂಗಳೂರಿಗೆ ತೆರಳಿ ಚಾಲಕನಾಗಿ ದುಡಿಯುತ್ತಿದ್ದ. ಆತ ವಾಹನ ಕಳವು ಮಾಡುವ ಉದ್ದೇಶದಿಂದಲೇ ಮಂಗಳೂರಿಗೆ ಬಂದಿದ್ದ ಎನ್ನುತ್ತಾರೆ ಪೊಲೀಸರು.

ಜೀಪು ಕಳವು ಮಾಡಿ ಕೇರಳಕ್ಕೆ ಪಲಾಯನ ಮಾಡುವ ಯೋಜನೆ ಆತನದ್ದಾಗಿತ್ತು. ಆದರೆ ಮೊಬೈಲ್‌ ಸ್ವಿಚ್‌ ಆಫ್‌ ಆದ ಕಾರಣ ಹೆದ್ದಾರಿಗೆ ಹೋದ ಮೇಲೆ ಯಾವ ಕಡೆ ಹೋಗುವುದು ಎಂದು ಗೊತ್ತಾಗದೆ ಉಡುಪಿ, ಕುಂದಾಪುರ ಕಡೆಗೆ ಹೋಗಿದ್ದಾನೆ. ಕಳವಿಗೂ ಮೊದಲು ಜೀಪ್‌ನಲ್ಲಿದ್ದ ಸೈರನ್‌ ಕೇಬಲ್‌ಗಳನ್ನು ತುಂಡರಿಸಿದ್ದಾನೆ. ಆದರೆ ಆತನಿಗೆ ಜಿಪಿಎಸ್‌ ಇರುವುದು ತಿಳಿದಿರಲಿಲ್ಲ. ಇದರಿಂದ ಅರಣ್ಯ ಅಧಿಕಾರಿಗಳಿಗೆ ವಾಹನವನ್ನು ಲೋಕೇಶನ್‌ ಪತ್ತೆಹೆಚ್ಚುವುದು ಸುಲಭವಾಗಿದೆ.

error: Content is protected !!
Scroll to Top