(ನ್ಯೂಸ್ ಕಡಬ) newskadaba.com, ಮೇ.15: ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ನಡುವೆಯೇ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನೀಟ್-ಯುಜಿ 2026 ಪರೀಕ್ಷೆಯನ್ನು ಜೂನ್ 21 ರಂದು ನಡೆಸುವುದಾಗಿ ಘೋಷಿಸಿದೆ. ವೈದ್ಯಕೀಯ ಕಾಲೇಜುಗಳ ಪ್ರವೇಶಾತಿಗಾಗಿ ದೇಶಾದ್ಯಂತ ಮೇ 3ರಂದು ನಡೆದಿದ್ದ ನೀಟ್ (ಯುಜಿ) 2026ರ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಅನಿವಾರ್ಯವಾಗಿ ಪರೀಕ್ಷೆಯನ್ನೇ ರದ್ದು ಮಾಡುವ ನಿರ್ಧಾರ ತೆಗೆದುಕೊಂಡಿತ್ತು.
ರದ್ದತಿಯಿಂದಾಗಿ ಲಕ್ಷಾಂತರ ವೈದ್ಯಕೀಯ ಆಕಾಂಕ್ಷಿಗಳು ಪರಿಷ್ಕೃತ ವೇಳಾಪಟ್ಟಿಯ ಕುರಿತು ಹೆಚ್ಚಿನ ಸ್ಪಷ್ಟತೆಗಾಗಿ ಕಾಯಬೇಕಾಯಿತು. ಇದೀಗ ಹೊಸ ಪರೀಕ್ಷಾ ವೇಳಾಪಟ್ಟಿಯನ್ನು ಎನ್ಟಿಎ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ ಮೂಲಕ ಈ ಘೋಷಣೆ ಮಾಡಿದೆ. ಜೂನ್ 21 ರ ಭಾನುವಾರದಂದು ನೀಟ್-ಯುಜಿ 2026 ಮರು ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದ್ದೇವೆ ಮತ್ತು ಈ ನಿಟ್ಟಿನಲ್ಲಿ ಭಾರತ ಸರ್ಕಾರದಿಂದ ಅನುಮೋದನೆ ಪಡೆಯಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
“ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು NEET (UG) 2026 ರ ಮರು ಪರೀಕ್ಷೆಯನ್ನು ಭಾನುವಾರ, ಜೂನ್ 21, 2026 ರಂದು ನಡೆಸಲು ನಿರ್ಧರಿಸಿದೆ” ಎಂದು ಸಂಸ್ಥೆ ತನ್ನ ಪೋಸ್ಟ್ನಲ್ಲಿ ತಿಳಿಸಿದೆ. ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಅಥವಾ ನವೀಕರಣಗಳಿಗಾಗಿ ಪೋಷಕರು ಮತ್ತು ಅಭ್ಯರ್ಥಿಗಳು ತಮ್ಮ ಅಧಿಕೃತ ಸಂವಹನ ಮಾರ್ಗಗಳನ್ನು ಮಾತ್ರ ಅವಲಂಬಿಸಬೇಕೆಂದು ಎನ್ಟಿಎ ಸೂಚಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷೆ ರದ್ದತಿಗೆ ಸಂಬಂಧಿಸಿ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಈ ನಡುವೆ ಅಕ್ರಮ ಕುರಿತು ಸಮಗ್ರ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರ ಸಿಬಿಐಗೆ ನಿರ್ದೇಶನ ನೀಡಿದೆ. ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಸಿಬಿಐ ಪ್ರಕರಣ ದಾಖಲಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನದ ವಿಶೇಷ ಕಾರ್ಯಪಡೆ ಪೊಲೀಸರು 20ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ…
ನೀಟ್ ಪ್ರಶ್ನೆಪತ್ರಿಕೆ ಮಹಾರಾಷ್ಟ್ರದ ನಾಸಿಕ್ ಅಥವಾ ಪುಣೆಯಿಂದ ಸೋರಿಕೆಯಾಗಿದೆ ಎಂದು ಹೇಳಲಾಗಿದ್ದು, 30 ಸಾವಿರದಿಂದ 28 ಲಕ್ಷ ರು.ವರೆಗೆ ಮಾರಾಟವಾಗಿದೆ. 410 ಪ್ರಶ್ನೆಗಳ ಅಭ್ಯಾಸ ಪ್ರಶ್ನೆಪತ್ರಿಕೆಗಳ ರೂಪದಲ್ಲಿ ವಿದ್ಯಾರ್ಥಿಗಳಿಗೆ ಹಂಚಿಕೆಯಾಗಿದ್ದು, ಇವುಗಳಲ್ಲಿದ್ದ 120 ಪ್ರಶ್ನೆಗಳು ನೀಟ್ ಪ್ರಶ್ನೆಪತ್ರಿಕೆಯಲ್ಲಿ ಪುನರಾವರ್ತನೆಯಾಗಿವೆ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.









