ಉಳ್ಳಾಲ| ರಸ್ತೆಯಲ್ಲಿ ಮೀನಿನ ಎಣ್ಣೆ ಸೋರಿಕೆ: ಜಾರಿ ಬಿದ್ದ ದ್ವಿಚಕ್ರ ವಾಹನ ಸವಾರರು; ಕ್ಯಾಂಟರ್ ತಡೆದು ಸ್ಥಳೀಯರಿಂದ ಪ್ರತಿಭಟನೆ



(ನ್ಯೂಸ್‌ ಕಡಬ) newskadaba.com,  ಮೇ.15: ಕೋಟೆಪುರದ ಫಿಶ್ ಮೀಲ್ ಫ್ಯಾಕ್ಟರಿಯಿಂದ ಮೀನಿನ ಎಣ್ಣೆ ಹೊತ್ತೊಯ್ಯುತ್ತಿದ್ದ ಕ್ಯಾಂಟರ್ ತಾಂತ್ರಿಕ ದೋಷದಿಂದ ಭಾರೀ ಪ್ರಮಾಣದ ಮೀನಿನ ಎಣ್ಣೆ ಉಳ್ಳಾಲದ ರಸ್ತೆಯಲ್ಲಿ ಸೋರಿಕೆಯಾಗಿ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಗಾಯಗೊಂಡಿದ್ದು, ಇದರಿಂದ ಆಕ್ರೋಶಗೊಂಡ ಸ್ಥಳೀಯರು ಮೀನಿನ ಕ್ಯಾಂಟರನ್ನ ತಡೆದು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ರಾತ್ರಿ ಉಳ್ಳಾಲ ಬೈಲಿನಲ್ಲಿ ನಡೆದಿದೆ.
ಕೋಟೆಪುರದಲ್ಲಿ ಫಿಶ್ ಮೀಲ್ ಫ್ಯಾಕ್ಟರಿಗಳು ಕಾರ್ಯಾಚರಿಸುತ್ತಿದ್ದು,







ಇಂದು ರಾತ್ರಿ ಕೋಟೆಪುರದಿಂದ ಮಂಗಳೂರು ಬಂದರಿಗೆ ಫಿಶ್ ಮೀಲ್ ಆಯಿಲನ್ನು ಹೊತ್ತೊಯ್ಯುತ್ತಿದ್ದ ಕ್ಯಾಂಟರ್‌ನಿಂದ ಅಬ್ಬಕ್ಕ ಸರ್ಕಲ್ ನಿಂದ ಉಳ್ಳಾಲ ಬೈಲ್ ವರೆಗೂ ಫಿಶ್ ಆಯಿಲ್ ಸೋರಿಕೆಯಾಗಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಜಾರಿ ಬಿದ್ದಿದ್ದಾರೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಕ್ಯಾಂಟರನ್ನು ಉಳ್ಳಾಲ ಬೈಲಿನಲ್ಲಿ ತಡೆದು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸೂಕ್ತ ಕಾನೂನು ಕ್ರಮಕೈಗೊಳ್ಳಲು ಸ್ಪೀಕರ್ ಯುಟಿ ಖಾದರ್ ಸೂಚನೆ
ಉಳ್ಳಾಲದ ರಸ್ತೆಯಲ್ಲಿ ಫಿಶ್‌ಮಿಲ್ ಲಾರಿಯಿಂದ ಸೋರಿಕೆಯಾದ ಮೀನಿನ ಎಣ್ಣೆಯ ಮೇಲೆ ಸಂಚರಿಸಿದ ದ್ವಿಚಕ್ರ ವಾಹನಗಳು ಉರುಳಿ ಬಿದ್ದು, ವಾಹನ ಸವಾರರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಹಾಗೂ ಸ್ಥಳೀಯ ಶಾಸಕ ಯು.ಟಿ.ಖಾದರ್ ಅವರು ಮಂಗಳೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.
ಅಪಘಾತದಿಂದಾಗಿ ಗಾಯಗೊಂಡ ದ್ವಿಚಕ್ರ ವಾಹನ ಸವಾರರಿಗೆ ಸೂಕ್ತ ಪರಿಹಾರವನ್ನು ಫಿಶ್‌ಮಿಲ್‌ನವರು ನೀಡಬೇಕು ಎಂದು ಖಾದರ್ ಹೇಳಿದ್ದಾರೆ.
ಇಂತಹ ಘಟನೆಗಳು ನಡೆಯದಂತೆ ಇಲಾಖೆ ಎಚ್ಚರವಹಿಸಬೇಕು. ಕೈಗಾರಿಕೆಯ ಅಭಿವೃದ್ಧಿಗೆ ಪೂರ್ಣ ಬೆಂಬಲ ಇದೆ. ಆದರೆ ಇದೇ ವೇಳೆ ಜನಸಾಮಾನ್ಯರಿಗೆ ತೊಂದರೆಯಾದರೆ ಸಹಿಸಲು ಸಾಧ್ಯವಿಲ್ಲ. ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕಾರ್ಖಾನೆಯ ಮಾಲಕರು ಎಚ್ಚರವಹಿಸಬೇಕು ಎಂದು ಖಾದರ್ ತಿಳಿಸಿದ್ದಾರೆ.






error: Content is protected !!
Scroll to Top