ಮಂಗಳೂರಲ್ಲಿ ಹೈಟೆಕ್ ಹವಾ – ಹೋಟೆಲ್‌ನಲ್ಲಿ ರೋಬೋ ವೈಟರ್ ಸೇವೆ!



(ನ್ಯೂಸ್‌ ಕಡಬ) newskadaba.com,  .17: ಕರಾವಳಿಯ ನಗರ ಮಂಗಳೂರು ಇದೀಗ ಹೈಟೆಕ್ ರೂಪ ಪಡೆದುಕೊಳ್ಳುತ್ತಿರುವುದಕ್ಕೆ ಹೊಸ ಉದಾಹರಣೆ ದೊರೆತಿದೆ. ಇತ್ತೀಚೆಗೆ ಎಐ ಟೀಚರ್ ಸುದ್ದಿ ಮಾಡಿದ ಬಳಿಕ, ಈಗ ನಗರದ ಹೋಟೆಲ್‌ವೊಂದರಲ್ಲಿ ರೋಬೋ ವೈಟರ್ ಗಮನ ಸೆಳೆಯುತ್ತಿದೆ.







ಕೆ.ಎಸ್. ರಾವ್ ರಸ್ತೆಯಲ್ಲಿರುವ ಪ್ರಸಿದ್ಧ ಪಾಕಶಾಲಾ ಹೋಟೆಲ್‌ನಲ್ಲಿ ಈ ರೋಬೋ ಸೇವೆ ಆರಂಭವಾಗಿದ್ದು, ಗ್ರಾಹಕರಿಗೆ ಹೊಸ ಅನುಭವ ನೀಡುತ್ತಿದೆ. ಗ್ರಾಹಕರು ಆರ್ಡರ್ ಮಾಡಿದ ಮಸಾಲೆ ದೋಸೆ ಅಥವಾ ಜ್ಯೂಸ್ ಅನ್ನು ಯಾವುದೇ ಮನುಷ್ಯರ ಸಹಾಯವಿಲ್ಲದೇ ರೋಬೋವೇ ಟೇಬಲ್‌ಗೆ ತಲುಪಿಸುತ್ತದೆ.






3 ಅಡಿ ಎತ್ತರದ ಆಕರ್ಷಕ ರೋಬೋ : ಸುಮಾರು 3 ಅಡಿ ಎತ್ತರದ ಈ ರೋಬೋ ಹೋಟೆಲ್‌ನ 35 ಟೇಬಲ್‌ಗಳ ನಡುವೆ ಸುಲಭವಾಗಿ ಸಂಚರಿಸುತ್ತದೆ. ಹೋಟೆಲ್‌ಗೆ ಬರುವವರ ಗಮನ ಸೆಳೆಯುತ್ತಿರುವ ಈ ರೋಬೋ, ವಿಶೇಷವಾಗಿ ಮಕ್ಕಳಿಗೆ ಹೆಚ್ಚು ಆಕರ್ಷಣೆಯಾಗಿದ್ದು, ಅದರ ಜೊತೆ ಫೋಟೋ ತೆಗೆಯಲು ಎಲ್ಲರೂ ಉತ್ಸುಕರಾಗಿದ್ದಾರೆ.

ಜ್ಯೂಸ್ ಚೆಲ್ಲಲ್ಲ, ಅಡ್ಡ ಬಂದರೆ ನಿಲ್ಲುತ್ತದೆ : ಜಪಾನ್ ತಂತ್ರಜ್ಞಾನ ಆಧಾರಿತ ಈ ರೋಬೋ ಬೆಲೆ ಸುಮಾರು ರೂ. 2 ರಿಂದ ರೂ. 3 ಲಕ್ಷವರೆಗೆ ಇರುತ್ತದೆ. ಇದರಲ್ಲಿ ‘ಫುಡ್ ಮೋಡ್’ ಮತ್ತು ‘ಜ್ಯೂಸ್ ಮೋಡ್’ ಎಂಬ ವಿಶೇಷ ಆಯ್ಕೆಗಳು ಇದ್ದು, ಜ್ಯೂಸ್ ತರುವಾಗ ಗ್ಲಾಸ್‌ನಿಂದ ಒಂದು ಹನಿ ಕೂಡ ಚೆಲ್ಲದಂತೆ ನಿಧಾನವಾಗಿ ಚಲಿಸುತ್ತದೆ. ದಾರಿಯಲ್ಲಿ ಯಾರಾದರೂ ಅಡ್ಡ ಬಂದರೆ, ಸೆನ್ಸರ್ ಮೂಲಕ ತಕ್ಷಣ ನಿಲ್ಲುವ ಸಾಮರ್ಥ್ಯವೂ ಇದಕ್ಕಿದೆ.

ಚಾರ್ಜ್ ಮಾಡಿದರೆ ದಿನವಿಡೀ ಸೇವೆ : ಕೇವಲ 4 ಗಂಟೆಗಳ ಚಾರ್ಜ್‌ನೊಂದಿಗೆ ಈ ರೋಬೋ ದಿನವಿಡೀ ನಿರಂತರವಾಗಿ ಕೆಲಸ ಮಾಡುತ್ತದೆ. ಕೆಲಸ ಮುಗಿದ ನಂತರ ಸ್ವಯಂ ಚಾರ್ಜಿಂಗ್ ಪಾಯಿಂಟ್‌ಗೆ ಹೋಗಿ ಕನೆಕ್ಟ್ ಆಗುವಷ್ಟು ಸ್ಮಾರ್ಟ್ ಆಗಿದೆ. ಇದರಿಂದ ಹೋಟೆಲ್ ಸಿಬ್ಬಂದಿಗೆ ಭಾರವಾದ ತಟ್ಟೆಗಳನ್ನು ಹೊರುವ ಕಷ್ಟ ಕಡಿಮೆಯಾಗಿದೆ.

ಮುಂದಿನ ದಿನಗಳಲ್ಲಿ ಕ್ಲೀನಿಂಗ್ ಕಾರ್ಯಗಳಿಗೂ ರೋಬೋ ಬಳಕೆ ಮಾಡಲು ಹೋಟೆಲ್ ನಿರ್ವಹಣೆ ಯೋಜನೆ ರೂಪಿಸುತ್ತಿದೆ. ಒಟ್ಟಿನಲ್ಲಿ, ಮಂಗಳೂರಿನಲ್ಲಿ ರೋಬೋ ವೈಟರ್ ಹೊಸ ಟ್ರೆಂಡ್ ಆಗಿ ಹೊರಹೊಮ್ಮಿದ್ದು, ಈ ಹೈಟೆಕ್ ಸೇವೆಯನ್ನು ನೋಡಲು ಜನರು ಹೋಟೆಲ್‌ಗೆ ಭೇಟಿ ನೀಡುತ್ತಿದ್ದಾರೆ.

error: Content is protected !!
Scroll to Top