ರಾಜ್ಯಾದ್ಯಂತ 365 ನ್ಯಾಯಾಧೀಶರ ವರ್ಗಾವಣೆ



(ನ್ಯೂಸ್‌ ಕಡಬ) newskadaba.com,  .17: ರಾಜ್ಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಬಹು ದೊಡ್ಡ ಆಡಳಿತಾತ್ಮಕ ಬದಲಾವಣೆ ಮಾಡಲಾಗಿದೆ. ಒಟ್ಟು 365 ನ್ಯಾಯಾಧೀಶರ ವರ್ಗಾವಣೆ ಮಾಡಿ ಹೈಕೋರ್ಟ್ ರಿಜಿಸ್ಟ್ರಾರ್ ಆದೇಶ ಹೊರಡಿಸಿದೆ. 111 ಜಿಲ್ಲಾ ನ್ಯಾಯಾಧೀಶರು, 115 ಹಿರಿಯ ಸಿವಿಲ್ ನ್ಯಾಯಾಧೀಶರು, 139 ಸಿವಿಲ್ ಜಡ್ಜ್​​ಗಳ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆ ಪ್ರಕ್ರಿಯೆಯಲ್ಲಿ, ಯೋಗೀಶ್​ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ನೀಡಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾ. ಸಂತೋಷ್ ಗಜಾನನ ಭಟ್ ಕೂಡ ವರ್ಗಾವಣೆ ಆಗಿದ್ದಾರೆ.







ಬುಧವಾರ ಯೋಗೀಶ್​ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಕಾಂಗ್ರೆಸ್​ ಶಾಸಕ ವಿನಯ್​ ಕುಲಕರ್ಣಿ ಅವರನ್ನು ದೋಷಿ ಎಂದು ಜನಪ್ರತಿನಿಧಿಗಳ ಕೋರ್ಟ್ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ತೀರ್ಪು ನೀಡಿದ್ದರು. ನಿನ್ನೆ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಅಪರಾಧಿಗಳ ಹೇಳಿಕೆ ದಾಖಲಿಸಿಕೊಂಡು ಶಿಕ್ಷೆ ಪ್ರಕಟದ ಆದೇಶವನ್ನು ಇಂದಿಗೆ (ಏ.17) ಕಾಯ್ದಿರಿಸಿದ್ದಾರೆ. ಈ ಮಧ್ಯೆ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ಕರ್ನಾಟಕ ಮೀಡಿಯೇಷನ್ ಸೆಂಟರ್ ನಿರ್ದೇಶಕರಾಗಿ‌ ವರ್ಗಾವಣೆಗೊಳಿಸಲಾಗಿದೆ. ಜೂನ್ 1ರಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.






3 ವರ್ಷ ಕಾಲ ಜನಪ್ರತಿನಿಧಿಗಳ ಕೋರ್ಟ್ ನ್ಯಾಯಾಧೀಶರಾಗಿದ್ದ ನ್ಯಾ. ಸಂತೋಷ್ ಗಜಾನನ ಭಟ್ ಅವರ ಸ್ಥಾನಕ್ಕೆ ಮಂಡ್ಯದ 1ನೇ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ಕೆ.ಬಿ ಶಿವಪ್ರಸಾದ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಶಿವಪ್ರಸಾದ್ ಅವರು ಪ್ರಸ್ತುತ ಮಂಡ್ಯದ 1ನೇ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದು, ಜೂನ್‌ನಿಂದ ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ರಾಜ್ಯದ ಪ್ರಮುಖ ರಾಜಕೀಯ ಬೆಳವಣಿಗೆಗಳ ದೃಷ್ಟಿಯಿಂದ ಈ ಹುದ್ದೆಯ ನೇಮಕಾತಿ ಅತ್ಯಂತ ಪ್ರಮುಖವಾಗಿದೆ.

error: Content is protected !!
Scroll to Top