ಕಚ್ಚಾ ತೈಲ-ಗ್ಯಾಸ್ ಬಿಕ್ಕಟ್ಟು: ಅಗತ್ಯ ಸರಕುಗಳ ಕಾಯ್ದೆ ಸೆಕ್ಷನ್ 3 ಜಾರಿ, ಮಾರುಕಟ್ಟೆಯಲ್ಲಿ ಆತಂಕ



(ನ್ಯೂಸ್‌ ಕಡಬ) newskadaba.com, ಮಾ.21: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಅಮೆರಿಕ–ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದ ಪರಿಣಾಮ ಭಾರತದಲ್ಲೂ ಆರ್ಥಿಕ ತಲ್ಲಣ ಉಂಟಾಗಿದ್ದು, ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯ ಆತಂಕದ ಹಿನ್ನೆಲೆ ಕೇಂದ್ರ ಸರ್ಕಾರ ಅಗತ್ಯ ಸರಕುಗಳ ಕಾಯ್ದೆಯ ಸೆಕ್ಷನ್ 3 ಅನ್ನು ಜಾರಿಗೊಳಿಸಿದೆ.







ಸಂಘರ್ಷವು 21ನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆ, ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಕೊರತೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಗ್ಯಾಸ್ ಅನ್ನು ಅಗತ್ಯ ಸರಕುಗಳ ಪಟ್ಟಿಗೆ ಸೇರಿಸಿದ್ದ ಸರ್ಕಾರ, ಬ್ಲ್ಯಾಕ್ ಮಾರ್ಕೆಟಿಂಗ್ ನಿಯಂತ್ರಣ ಹಾಗೂ ಸರಕುಗಳ ಲಭ್ಯತೆ ಖಚಿತಪಡಿಸಲು ಈ ಕ್ರಮ ಕೈಗೊಂಡಿದೆ.






ಸೆಕ್ಷನ್ 3 ಜಾರಿಯಿಂದ ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ನೈಸರ್ಗಿಕ ಅನಿಲದ ಉತ್ಪಾದನೆ, ಸಂಸ್ಕರಣೆ, ಸಂಗ್ರಹಣೆ, ಆಮದು-ರಫ್ತು, ಮಾರುಕಟ್ಟೆ ಹಾಗೂ ಬಳಕೆಯಲ್ಲಿ ತೊಡಗಿರುವ ಕಂಪನಿಗಳು ತಮ್ಮ ನವೀಕೃತ ಮಾಹಿತಿಯನ್ನು ಸರ್ಕಾರದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಘಟಕಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ.

ಇದೇ ವೇಳೆ, ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಭಾರತೀಯ ಷೇರು ಮಾರುಕಟ್ಟೆಯಲ್ಲೂ ತೀವ್ರ ಕುಸಿತ ಕಂಡುಬಂದಿದೆ. 2,496 ಅಂಕಗಳು ಹಾಗೂ 775.65 ಅಂಕಗಳಷ್ಟು ಕುಸಿದಿದ್ದು, ಹೂಡಿಕೆದಾರರಿಗೆ ಸುಮಾರು ₹17 ಲಕ್ಷ ಕೋಟಿ ನಷ್ಟ ಉಂಟಾಗಿದೆ.ಇದರ ಜೊತೆಗೆ ಭಾರತೀಯ ರೂಪಾಯಿ ಮೌಲ್ಯವೂ ಕುಸಿತ ಕಂಡು, ಇಂದು 19 ಪೈಸೆ ಇಳಿಕೆಯಿಂದ ₹93.08 ಮಟ್ಟಕ್ಕೆ ತಲುಪಿದೆ. ಆರ್ಥಿಕ ಪರಿಸ್ಥಿತಿ ಇನ್ನಷ್ಟು ಅಸ್ಥಿರವಾಗುವ ಸಾಧ್ಯತೆ ಇರುವುದರಿಂದ, ಮುಂದಿನ ದಿನಗಳಲ್ಲಿ ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಆತಂಕ ವ್ಯಕ್ತವಾಗಿದೆ.

error: Content is protected !!
Scroll to Top