(ನ್ಯೂಸ್ ಕಡಬ) newskadaba.com, ಮಾ.11: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮನೆಯೊಂದರ ಸಮೀಪವಿರುವ ಶೆಡ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 4,175 ಲೀಟರ್ ಡೀಸೆಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೆಳ್ತಂಗಡಿ ಉಪವಿಭಾಗದ ಡಿವೈಎಸ್‌ಪಿ ರೋಹಿಣಿ ಸಿ.ಕೆ. ಅವರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಮಾರ್ಚ್ 9ರ ರಾತ್ರಿ ಈ ದಾಳಿ ನಡೆಸಲಾಗಿದೆ..
ಜಗದೀಶ್ (35) ಎಂಬುವವರ ಮನೆಯ ಪಕ್ಕದ ಶೆಡ್‌ನಲ್ಲಿ ತಪಾಸಣೆ ನಡೆಸಿದಾಗ, ತಲಾ 200 ಲೀಟರ್ ಸಾಮರ್ಥ್ಯದ 20 ಬ್ಯಾರೆಲ್‌ಗಳು ಮತ್ತು 35 ಲೀಟರ್ ಸಾಮರ್ಥ್ಯದ 5 ಕ್ಯಾನ್‌ಗಳಲ್ಲಿ ಒಟ್ಟು 4,175 ಲೀಟರ್ ಡೀಸೆಲ್ ಪತ್ತೆಯಾಗಿದೆ. ಅಲ್ಲದೆ, ಸ್ಥಳದಲ್ಲಿದ್ದ ಹಲವಾರು ಖಾಲಿ ಬ್ಯಾರೆಲ್‌ಗಳು, ಕ್ಯಾನ್‌ಗಳು ಮತ್ತು ಇತರ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸುಮಾರು 4,175 ಲೀಟರ್ ನಷ್ಟು ಡೀಸೆಲ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಡಿಸೇಲ್ ನ ಒಟ್ಟು ಮೌಲ್ಯ ಸುಮಾರು 3.5 ಲಕ್ಷ ರೂ. ಆಗಿದೆ. ಆರೋಪಿ ಜಗದೀಶ್ (35) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ..ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಸೆಕ್ಷನ್ 287 ಮತ್ತು 3(5), ಅಗತ್ಯ ವಸ್ತುಗಳ ಕಾಯ್ದೆ 1955ರ ಸೆಕ್ಷನ್ 3 ಮತ್ತು 7, ಹಾಗೂ ಪೆಟ್ರೋಲಿಯಂ ಕಾಯ್ದೆ 1934ರ ಸೆಕ್ಷನ್ 23ರ ಅಡಿಯಲ್ಲಿ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ..








