‘ಯುದ್ಧಕ್ಕೆ ನನ್ನ ಎಲ್ಲಾ ಸೈನಿಕರು ಸಿದ್ಧ’ – ಭಾರತ ತಂಡಕ್ಕೆ ಸ್ಯಾಮಿ ಎಚ್ಚರಿಕೆ!



(ನ್ಯೂಸ್‌ ಕಡಬ) newskadaba.com,ಮಾ.02: ಭಾರತ ವಿರುದ್ಧದ ಮಹತ್ವದ ಪಂದ್ಯಕ್ಕೆ ವೆಸ್ಟ್ ಇಂಡೀಸ್ ತಂಡ ಸಂಪೂರ್ಣ ಸಜ್ಜಾಗಿದೆ ಎಂದು ತಂಡದ ಮುಖ್ಯ ಕೋಚ್ ಡ್ಯಾರೆನ್ ಸ್ಯಾಮಿ ತಿಳಿಸಿದ್ದಾರೆ. ಮಾರ್ಚ್ 1ರಂದು ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ತಂಡ ಸೆಮಿಫೈನಲ್ ಪ್ರವೇಶಿಸಲಿದೆ.
ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಯಾಮಿ, “ಟೀಮ್ ಇಂಡಿಯಾವನ್ನು ಎದುರಿಸಲು ನನ್ನ ಪಡೆ ಸಂಪೂರ್ಣ ಸಿದ್ಧವಾಗಿದೆ. ಯಾವುದೇ ಸವಾಲನ್ನೂ ಎದುರಿಸಲು ನಾವು ತಯಾರಾಗಿದ್ದೇವೆ. ಈ ಯುದ್ಧಕ್ಕೆ ನನ್ನ ಎಲ್ಲಾ ಸೈನಿಕರು ಸಜ್ಜಾಗಿದ್ದಾರೆ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಭಾರತ ತಂಡವನ್ನು ಬಲಿಷ್ಠ “ಗೋಲಿಯಾತ್” ಗೆ ಹೋಲಿಸಿದ ಅವರು, ತಮ್ಮ ತಂಡವನ್ನು “ಡೇವಿಡ್” ಎಂದು ವರ್ಣಿಸಿದರು. 2016ರಲ್ಲಿ ಡೇವಿಡ್ ಹೇಗೆ ಗೋಲಿಯಾತ್ ಅನ್ನು ಸೋಲಿಸಿತ್ತೋ, ಅದೇ ಇತಿಹಾಸ ಮರುಕಳಿಸಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು. 2016ರಲ್ಲಿ ಇದೇ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸ್ಯಾಮಿ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ತಂಡ ಐಸಿಸಿ ಟಿ20 ವಿಶ್ವಕಪ್ ಜಯಿಸಿತ್ತು. ಆ ನೆನಪುಗಳು ತಂಡಕ್ಕೆ ಹೆಚ್ಚುವರಿ ಪ್ರೇರಣೆ ನೀಡುತ್ತವೆ ಎಂದರು.
ತಂಡದ ಬ್ಯಾಟಿಂಗ್ ಬಲದ ಕುರಿತು ಮಾತನಾಡಿದ ಸ್ಯಾಮಿ, ವಿಶೇಷವಾಗಿ ಶಿಮ್ರಾನ್ ಹೆಟ್ಮೆಯರ್ ಅವರ ಉತ್ತಮ ಫಾರ್ಮ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಂಡದ ಆಳವಾದ ಬ್ಯಾಟಿಂಗ್ ಕ್ರಮಾಂಕದಿಂದ ಭಾರತ ಬೌಲರ್‌ಗಳಿಗೆ ಕಠಿಣ ಸವಾಲು ಎದುರಾಗಲಿದೆ ಎಂದರು. “ಭಾರತವನ್ನು ಸೋಲಿಸಿ ನಾವು ಸೆಮಿಫೈನಲ್ ಪ್ರವೇಶಿಸುತ್ತೇವೆ” ಎಂದು ಸ್ಯಾಮಿ ವಿಶ್ವಾಸ ವ್ಯಕ್ತಪಡಿಸಿದ್ದು, ಈ ಮಹತ್ವದ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿದೆ





error: Content is protected !!
Scroll to Top