ಶಾಲಾ ಪ್ರವಾಸ: ಮೈಸೂರು ಕೆಎಸ್‌ಆರ್‌ಟಿಸಿಯ ಸರಕಾರಿ ಬಸ್‌ಗಳಿಗೆ ಹೆಚ್ಚಾದ ಬೇಡಿಕೆ



(ನ್ಯೂಸ್‌ ಕಡಬ) newskadaba.com,  ಡಿ.15 ಮೈಸೂರು: ಇತ್ತೀಚೆಗೆ ಶಾಲಾ ಪ್ರವಾಸಕ್ಕೆ ತೆರಳಿದ್ದ ಬಸ್‌ ಅಪಘಾತದಿಂದ ಬಾಲಕನೊಬ್ಬ ಮೃತಪಟ್ಟ ಬೆನ್ನಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದ್ದು, ಸಾರಿಗೆ ಸಂಸ್ಥೆ ಬಸ್‌ಗಳಲ್ಲಿಯೇ ಪ್ರವಾಸಕ್ಕೆ ತೆರಳಬೇಕೆಂಬ ನಿಯಮವನ್ನು ಕಟ್ಟು ನಿಟ್ಟಾಗಿ ಸೂಚಿಸಿದೆ.





ಇದರಿಂದ ಸಾರಿಗೆ ಸಂಸ್ಥೆ ಬಸ್‌ಗಳಿಗೆ ಶುಕ್ರ ದೆಸೆ ಶುರುವಾಗಿದ್ದು, ಶೇ. 10 ರಷ್ಟು ಬೇಡಿಕೆ ಹೆಚ್ಚಾಗಿದೆ. ಶೈಕ್ಷಣಿಕ ಪ್ರವಾಸದ ಅವಧಿ ಡಿಸೆಂಬರ್‌ ಅಂತ್ಯಕ್ಕೆ ಮುಕ್ತಾಯ ವಾಗಲಿದ್ದು, ಅಷ್ಟರೊಳಗೆ ಪ್ರವಾಸ ವನ್ನು ಮುಗಿಸಬೇಕಾಗಿರುವುದರಿಂದ ಸರಕಾರಿ ಬಸ್‌ಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗಲಿದ್ದು, ಸಾರಿಗೆ ಇಲಾಖೆಗೆ ಶೈಕ್ಷಣಿಕ ಪ್ರವಾಸಕ್ಕೆ ಬಸ್‌ಗಳನ್ನು ಪೂರೈಸುವುದು ದೊಡ್ಡ ಸವಾಲಾಗಿದೆ.”ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ 670 ಬಸ್‌ಗಳಿದ್ದು, ಹೆಚ್ಚುವರಿ ಬಸ್‌ಗಳು ಅಗತ್ಯವಿದ್ದರೆ ಕೆಲವೆಡೆ ರೂಟ್‌ಗಳನ್ನು ಕಡಿತ ಗೊಳಿಸಿ ಬಸ್‌ಗಳನ್ನು ಪೂರೈಸಲು ಅವಕಾಶವಿದೆ,” ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು.






ಮೊದಲಿನಿಂದಲೂ ಸರಕಾರಿ ಶಾಲೆಗಳ ಶಿಕ್ಷಕರು ಸರಕಾರಿ ಬಸ್‌ಗಳಲ್ಲಿಯೇ ಪ್ರವಾಸವನ್ನು ಆಯೋಜಿಸುತ್ತಿದ್ದರು. ಆದರೆ, ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಮತ್ತು ಶಿಕ್ಷಕರು ಖಾಸಗಿ ಬಸ್‌ಗಳನ್ನು ಹೆಚ್ಚಾಗಿ ಬಳಸುತ್ತಿದ್ದರು. ಮೈಸೂರಿನ ಖಾಸಗಿ ಶಾಲೆಯೊಂದು ಕೈಗೊಂಡಿದ್ದ ಪ್ರವಾಸದ ವೇಳೆ ಖಾಸಗಿ ಬಸ್‌ ಅಪಘಾತಕ್ಕೀಡಾಗಿ ವಿದ್ಯಾರ್ಥಿ ಮೃತಪಟ್ಟ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಪ್ರವಾಸಿ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ನಿರ್ದೇಶನ ನೀಡಿದೆ. ಇದರಿಂದ ಖಾಸಗಿ ಶಾಲೆಯವರು ಶೈಕ್ಷಣಿಕ ಪ್ರವಾಸಕ್ಕೆ ಸರಕಾರಿ ಬಸ್‌ ಬುಕ್ಕಿಂಗ್‌ಗಾಗಿ ಕಾಯುತ್ತಿದ್ದು, ಸರಕಾರಿ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.

error: Content is protected !!
Scroll to Top