ಗೋಳಿತ್ತಡಿ – ಕುದುಲೂರು ಹೊಂಡ ಗುಂಡಿಗೆ ಮಣ್ಣು ಹಾಕಿ ಮುಚ್ಚಿದ ಇಸಾಕ್ ಕುದುಲೂರು-ಏಕಾಂಗಿ ಶ್ರಮದಾನಕ್ಕೆ ಮೆಚ್ಚುಗೆ



(ನ್ಯೂಸ್ ಕಡಬ) newskadaba.com,  .18 : ಕಡಬ, ನ.18. ಕಡಬ ತಾಲೂಕು ಕೊಯಿಲ ಮತ್ತು ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗೋಳಿತ್ತಡಿ – ಏಣಿತ್ತಡ್ಕ – ಕುದುಲೂರು ಸಂಪರ್ಕ ರಸ್ತೆಯ ಗೋಳಿತ್ತಡಿಯಿಂದ ಕುದುಲೂರು ವರೆಗಿನ ಸುಮಾರು 4 ಕಿಮೀ ಉದ್ದದ ರಸ್ತೆಯುದ್ದಕ್ಕೂ  ಉಂಟಾಗಿರುವ ಹೊಂಡಗಳಿಗೆ ಕುದುಲೂರು ನಿವಾಸಿ ಇಸಾಕ್ ಎಂಬುವವರು ಸ್ವಯಂಪ್ರೇರಿತರಾಗಿ ಯಾವುದೇ ಫಲಾಪೇಕ್ಷೆಯಿಲ್ಲದೆ ಏಕಾಂಗಿಯಾಗಿ ಗುರುವಾರ ಮತ್ತು ಶುಕ್ರವಾರ ಎರಡು ದಿನ  ಮಣ್ಣು ಹಾಕಿ ಹೊಂಡ ಮುಚ್ಚಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.





ವೃತ್ತಿಯಲ್ಲಿ ಅಡಿಕೆ ಸುಳಿಯುವ ಕಾಯಕ ಮಾಡುವ ಈ  ಯುವಕನ ಹೊಂಡ ಮುಚ್ಚುವ ಕಾರ್ಯವನ್ನು ಜನ ಮೆಚ್ಚಿಕೊಂಡಿದ್ದಾರೆ. ರಸ್ತೆ ಬದಿಯಲ್ಲಿನ ಗುಡ್ಡದಲ್ಲಿರುವ ಮಣ್ಣನ್ನು ಅಗೆದು ಹೊಂಡಕ್ಕೆ ಹಾಕಲಾಗಿದೆ. ಎರಡು ದಿನಗಳಿಂದ ಈ ಕೆಲಸ  ಮಾಡುತ್ತಿದ್ದು, ರಸ್ತೆಯಲ್ಲಿ ಓಡಾಡುವ ಮಂದಿ ಕಾರ್ಯ ಮೆಚ್ಚಿಕೊಂಡು ಎಳನೀರು, ಚಹಾ, ತಿಂಡಿಗಳನ್ನು ನೀಡಿದ್ದಾರೆ ಎನ್ನುತ್ತಾರೆ ಇಸಾಕ್ ಅವರು. ಈ ರಸ್ತೆಗೆ ಹಲವು ಭಾರಿ ತೇಪೆ ಕಾರ್ಯ ನಡೆದರೂ ಮತ್ತೆ ಮತ್ತೆ ಹೊಂಡ ನಿರ್ಮಾಣವಾಗುವುದರಿಂದ  ಸಂಚಾರ ಅಯೋಗ್ಯವಾಗಿದೆ. ನಿತ್ಯ ಸಾವಿರಾರು ವಾಹನಗಳು ಓಡಾಡುವ ಈ ರಸ್ತೆಗೆ ಹಲವು ಬಾರಿ ತೇಪೆ ಕಾರ್ಯ ನಡೆಸಲಾಗಿದೆ. ಅಂತೆಯೇ ಕಳೆದ ಬೇಸಿಗೆಯಲ್ಲೂ  ತೇಪೆ ಕಾರ್ಯ ನಡೆಸಲಾಗಿತ್ತು. ಬಳಿಕ ಮಳೆಗಾಲ ಪ್ರಾರಂಭದಲ್ಲೆ ತೇಪೆ ಮಾಡಿದ ಹೊಂಡದ ಹೊರತಾಗಿ ಬೇರೆ ಕಡೆ ಹೊಂಡ ನಿರ್ಮಾಣವಾಗಿದೆ. ಹೀಗಾಗಿ ರಸ್ತೆ ದುರಸ್ತಿಯಾದರೂ ಗುಂಡಿ ಮಾತ್ರ ಅಭಾದಿತವಾಗಿ ಸಂಚಾರ ದುಸ್ತರವಾಗಿದೆ. ಗೋಳಿತ್ತಡಿಯಿಂದ ಏಣಿತ್ತಡ್ಕ, ಕುದುಲೂರು, ಕಕ್ವೆ, ಬುಡಲೂರು, ಕೊಲ್ಯ, ಸಬಳೂರು, ಪರಂಗಾಜೆ ಮೊದಲಾದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯುದ್ದಕ್ಕೂ ಅಲ್ಲಲ್ಲಿ ಹೊಂಡ ನಿರ್ಮಾಣವಾಗಿದೆ.   ರಾಜ್ಯ ಸರ್ಕಾರದ  ಮುಖ್ಯಮಂತ್ರಿ ಪ್ರಗತಿಪಥ  ಯೋಜನೆಯಡಿಯಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 9 ರಸ್ತೆಗಳಿಗೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಈ ಪಟ್ಟಿಯಲ್ಲಿ    ಗೋಳಿತ್ತಡಿ–ಏಣಿತ್ತಡ್ಕ-ಕುದುಲೂರು ರಸ್ತೆಯ ತ್ರಿವೇಣಿ ಸರ್ಕಲ್ ತನಕದ ಸುಮಾರು 3 ಕಿಮೀ ನಷ್ಟು ಉದ್ದದ  ರಸ್ತೆಯನ್ನು ಸೇರಿಸಲಾಗಿದೆ.    ಇನ್ನಷ್ಟೇ ಅನುಮೋದನೆ ಸಿಗಬೇಕಾಗಿದೆ ಎನ್ನುವ ಭರವಸೆ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರಿಂದ ದೊರೆತಿದೆ.






ಗೋಳಿತ್ತಡಿಯಿಂದ ಕುದುಲೂರುವರೆಗೆ ಹೊಂಡ ಗುಂಡಿಗಳಿಂದಾಗಿ ವಾಹನ ಸವಾರಿ ಮಾಡಲು ತೊಂದರೆಯಾಗುತ್ತಿರುವುದನ್ನು ಮನಗಂಡು ಮಣ್ಣು ಹಾಕಿ ಮುಚ್ಚಲು ಮುಂದಾದೆ. ಈ ಕೆಲಸದಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲ. ಜನರಿಗೋಸ್ಕರ ಒಳ್ಳೆಯ  ಕಾರ್ಯ ಮಾಡಿದರೆ ದೇವರ ಅನುಗ್ರಹವಿರುತ್ತದೆ ಎನ್ನುವ ನಂಬಿಕೆಯಿದೆ. ಮಣ್ಣು ಸವೆದು ಹೋಗುವ ತನಕವಾದರೂ ಸುಗಮ ಸಂಚಾರಕ್ಕೆ ತೊಂದರೆಯಾಗದು ಎನ್ನುವ ತೃಪ್ತಿಯಿದೆ ಎಂದು ಇಸಾಕ್ ಕುದುಲೂರು ಹೇಳಿದ್ದಾರೆ.

ಈ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿರುವುದರಿಂದ ದಿನ ನಿತ್ಯ ಓಡಾಡುವ ವಾಹನ ಸವಾರರು ಪರಾದಾಡುತ್ತಿದ್ದಾರೆ. ಈ ಮಧ್ಯೆ ಇಸಾಕ್ ಏಕಾಂಗಿಯಾಗಿ ಶ್ರಮದಾನದ ಮೂಲಕ ಹೊಂಡಕ್ಕೆ ಮಣ್ಣು ಹಾಕಿಮುಚ್ಚಿ ಮಾದರಿಯಾಗಿದ್ದಾರೆ. ಸಾರ್ವಜನಿಕ ಈ ಸೇವೆ ಎಲ್ಲರೂ ಮೆಚ್ಚಲೇಬೇಕಾದದ್ದು, ಆದಷ್ಟೂ ಬೇಗ ರಸ್ತೆ ಅಭಿವೃದ್ದಿಯಾಗಲಿ.

ಬಾಲಕೃಷ್ಣ ಬುಡಲೂರು, ಉದ್ಯಮಿ ಗೋಳಿತ್ತಡಿ

ವರದಿ: ಪ್ರವೀಣ್ ರಾಜ್ ಕೊಯಿಲ

error: Content is protected !!
Scroll to Top