(ನ್ಯೂಸ್ ಕಡಬ) newskadaba.com ಜೂ.19 ಪ್ರಸ್ತಾವಿತ ಶಿರಾಡಿ ಸುರಂಗ ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ರೈಲ್ವೆ ಮತ್ತು ರಸ್ತೆ ಸಾರಿಗೆ ಇಲಾಖೆಗಳು ಪ್ರತ್ಯೇಕವಾಗಿ ಸಮೀಕ್ಷೆ ನಡೆಸಲಿವೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಈಗಾಗಲೇ ಜಂಟಿ ಸಮೀಕ್ಷೆ ನಡೆಸಲಾಗಿದ್ದರೂ,ರಸ್ತೆ ಇಲಾಖೆಗೆ 38 ಕಿ.ಮೀ ವ್ಯಾಪ್ತಿಯ ಇಳಿಜಾರು ತಿದ್ದುಪಡಿ ಸಾಕಾದರೆ, ರೈಲ್ವೆ ಇಲಾಖೆಗೆ 88 ಕಿ.ಮೀ ದೂರದ ಅವಶ್ಯಕತೆಯಿದೆ.
ಪ್ರಸ್ತುತ ರಸ್ತೆ ಯೋಜನೆಯ ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು, ಮುಂಗಾರು ಅಧಿವೇಶನದ ವೇಳೆ ಅಧಿಕಾರಿಗಳನ್ನು ಭೇಟಿಯಾಗಿ ಹೆಚ್ಚಿನ ಮಾಹಿತಿ ಪಡೆಯಲಾಗುವುದು.ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು ಕಾರ್ಯಾಚರಣೆಗೆ ತಾಂತ್ರಿಕ ಮೌಲ್ಯಮಾಪನ ನಡೆಯುತ್ತಿದ್ದು, ಶೀಘ್ರದಲ್ಲೇ ಸೇವೆ ಆರಂಭವಾಗಲಿದೆ. ವೇಳಾಪಟ್ಟಿ ಅಂತಿಮಗೊಂಡ ಬಳಿಕ ಪುತ್ತೂರಿನಲ್ಲಿ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು.
ಮಂಗಳೂರು-ಬೆಂಗಳೂರು ನಡುವೆ ರೈಲುಗಳ ಸಂಖ್ಯೆ ಹೆಚ್ಚಿಸಲು ಜೋಡಿ ಮಾರ್ಗದ ಅಗತ್ಯವಿದೆ. ಘಾಟ್ ವಿಭಾಗದ ಸವಾಲುಗಳನ್ನು ಎದುರಿಸಲು ಹಾಸನ-ಮಂಗಳೂರು ರೈಲ್ವೆ ಕಾರ್ಪೊರೇಶನ್ ಅನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಿ, ದೀರ್ಘಾವಧಿ ಯೋಜನೆ ರೂಪಿಸಬೇಕಾಗಿದೆ.









