(ನ್ಯೂಸ್ ಕಡಬ) newskadaba.com, ನ.17 ಬೆಂಗಳೂರು ಗ್ರಾಮಾಂತರ: ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ತರಕಾರಿ, ಸೊಪ್ಪುಗಳ ದರ ಗಗನಕ್ಕೇರಿದ್ದು, ಗ್ರಾಹಕರು ಖರೀದಿಗೆ ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ.
ರಾಜ್ಯದಲ್ಲಿ ಸುಮಾರು 27 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ. ಇದರಲ್ಲಿ ತರಕಾರಿ ಬೆಳೆಯೇ ಹೆಚ್ಚು. ರಾಜ್ಯದಲ್ಲಿ ಕಳೆದ 15 ದಿನಗಳಿಂದ ಮೊಂಥಾ ಚಂಡಮಾರುತ, ವಾತಾವರಣ ವೈಪರೀತ್ಯದಿಂದ ಮಳೆಯಾಗುತ್ತಿದೆ. ಇದರಿಂದ ಸಾಕಷ್ಟು ರೀತಿಯ ರೋಗಭಾದೆ ಬೆಳೆಯಲ್ಲಿ ಕಾಣಿಸಿಕೊಂಡಿದೆ. ಜತೆಗೆ ತರಕಾರಿ ಬೆಳೆ ಬೆಳೆಯುವ ಸಮಯದಲ್ಲಿ ಮಳೆ ಬಂದದ್ದು ಸಹ ಕಾರಣವಾಗಿದೆ.
ಬೀನ್ಸ್, ಕ್ಯಾರೆಟ್, ಆಲೂಗಡ್ಡೆ, ಹಸಿಮೆಣಸು, ಬದನೆಕಾಯಿ ಸೇರಿದಂತೆ ಅನೇಕ ತರಕಾರಿಗಳ ದರ ಏರಿಕೆ ಕಂಡಿದೆ. ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ತರಕಾರಿ ಬಳಕೆ ಹೆಚ್ಚಾಗಿದೆ. ಅಕ್ಕಪಕ್ಕದ ರಾಜ್ಯಗಳಾದ ಆಂಧ್ರ, ತಮಿಳುನಾಡು, ಕೇರಳದಲ್ಲೂ ಕೂಡ ಬೆಲೆ ಏರಿಕೆ ಆಗಿರುವುದರಿಂದ ಹೆಚ್ಚುವರಿಯಾಗಿ ತರಕಾರಿಗಳ ಪೂರೈಕೆಯಾಗದೆ ಇರುವುದು ದರ ಏರಿಕೆಗೆ ಕಾರಣವಾಗಿದೆ..












