(ನ್ಯೂಸ್ ಕಡಬ) newskadaba.com, ನ.15 ಎರಡು ಟ್ಯಾಂಕರ್, ಆಟೋ ರಿಕ್ಷಾ ಹಾಗೂ ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಸಿಗ್ನಲ್ ಬಳಿ ಶನಿವಾರದಂದು ಬೆಳಗ್ಗೆ ಸಂಭವಿಸಿದೆ.
ಸಿಗ್ನಲ್ ನಲ್ಲಿ ಸರತಿಯಲ್ಲಿದ್ದ ವೇಳೆ ಎರಡು ಟ್ಯಾಂಕರ್, ಆಟೋ ರಿಕ್ಷಾ ಮತ್ತು ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಸಿಗ್ನಲ್ ನಲ್ಲಿ ನಿಂತಿದ್ದ ಟ್ಯಾಂಕರ್ ನ ಹಿಂಭಾಗದಲ್ಲಿ ಕಾರು ಮತ್ತು ಆಟೊ ರಿಕ್ಷಾ ನಿಂತಿತ್ತು. ಈ ವೇಳೆ ಅದರ ಹಿಂದಿನಿಂದ ಬಂದ ಇನ್ನೊಂದು ಟ್ಯಾಂಕರ್ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಿಕ್ಷಾ ಎದುರಿನಲ್ಲಿ ನಿಂತಿದ್ದ ಕಾರಿಗೆ ಅಪ್ಪಳಿಸಿ ಬಳಿಕ ಅದರ ಮುಂದೆ ನಿಂತಿದ್ದ ಮತ್ತೊಂದು ಟ್ಯಾಂಕರ್ ಗೆ ಢಿಕ್ಕಿ ಹೊಡೆದಿದೆ.
ಈ ವೇಳೆ ಆಟೊ ರಿಕ್ಷಾ ಎರಡು ಟ್ಯಾಂಕರ್ ಗಳ ಮಧ್ಯೆ ಸಿಲುಕಿ ಅಪ್ಪಚ್ಚಿಯಾಗಿದೆ. ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಮತ್ತು ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಡಿ ನೀಡಿ ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.








