(ನ್ಯೂಸ್ ಕಡಬ) newskadaba.com, ನ.06: ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮ ನಡೆಸಲು ಸರ್ಕಾರದ ಅನುಮತಿ ಪಡೆಯಬೇಕೆಂಬ ಆದೇಶಕ್ಕೆ ನೀಡಲಾಗಿದ್ದ ತಡೆಯನ್ನು ರಾಜ್ಯ ಸರ್ಕಾರ ಮೇಲ್ಮನವಿ ಅರ್ಜಿಯನ್ನು ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ. ನ್ಯಾ.ನಾಗಪ್ರಸನ್ನ ಅವರ ನೀಡಿದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿಯನ್ನು ಸಲ್ಲಿಕೆ ಮಾಡಿತ್ತು. ಈ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ.ಎಸ್.ಜಿ.ಪಂಡಿತ್ ಹಾಗೂ ನ್ಯಾ.ಗೀತಾ ಕೆ.ಬಿ ಅವರ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ತಡೆಯಾಜ್ಞೆ ತೆರವಿಗೆ ಏಕಸದಸ್ಯ ಪೀಠದಲ್ಲಿ ಮನವಿ ಸಲ್ಲಿಸಲು ವಿಭಾಗೀಯ ಪೀಠ ಅವಕಾಶ ನೀಡಿದೆ. ಎಲ್ಲಾ ವಾದಗಳನ್ನು ಮುಕ್ತವಾಗಿರಿಸಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಕ್ಟೋಬರ್ 28ರದು ಮಧ್ಯಂತರ ತಡೆಯಾಜ್ಞೆ
ಸರ್ಕಾರಿ ಆವರಣದಲ್ಲಿ ಚಟುವಟಿಕೆಗಳನ್ನು ನಡೆಸಲು ಖಾಸಗಿ ಸಂಸ್ಥೆಗಳು ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ರಾಜ್ಯ ಸರ್ಕಾರದ ಈ ನಿರ್ದೇಶನಕ್ಕೆ ರಾಜ್ಯ ಹೈಕೋರ್ಟ್‌ನ ಧಾರವಾಡ ಪೀಠ ಅಕ್ಟೋಬರ್ 28ರದು ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಈ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತ್ತು.
ಸರ್ಕಾರಕ್ಕೆ ಪತ್ರ ಬರೆದಿದ್ರು ಪ್ರಿಯಾಂಕ್ ಖರ್ಗೆ
ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗೆ ನಿಷೇಧ ಹೇರುವಂತೆ ಆಗ್ರಹಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ, ಸರ್ಕಾರಿ ಆವರಣದಲ್ಲಿ ಚಟುವಟಿಕೆಗಳನ್ನು ನಡೆಸಲು ಖಾಸಗಿ ಸಂಸ್ಥೆಗಳು ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆ ಮೂಲಕ, ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಪರೋಕ್ಷವಾಗಿ ಕಡಿವಾಣ ಹಾಕಲು ಸರ್ಕಾರ ಮುಂದಾಗಿತ್ತು.












