(ನ್ಯೂಸ್ ಕಡಬ) newskadaba.com, ಅ.20 ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮತ್ತೆ ವಿಸ್ತರಿಸಲಾಗಿದೆ. ಇದೀಗ ರಾಜ್ಯಾದ್ಯಂತ ಅಕ್ಟೋಬರ್ 31 ರವರೆಗೆ ಸಮೀಕ್ಷೆ ನಡೆಯಲಿದೆ.ಇದುವರೆಗೆ ಮನೆ-ಮನೆ ಸಮೀಕ್ಷೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಶಿಕ್ಷಕರು, ತಮ್ಮ ಶೈಕ್ಷಣಿಕ ಜವಾಬ್ದಾರಿಗಳಿಗೆ ಮರಳಲಿದ್ದಾರೆ.
ಸೆಪ್ಟೆಂಬರ್ 22 ರಂದು ಪ್ರಾರಂಭವಾದ ಸಮೀಕ್ಷೆಯು ಅಕ್ಟೋಬರ್ 7 ರಂದು ಕೊನೆಗೊಳ್ಳಬೇಕಾಗಿತ್ತು. ಅದನ್ನು ಅಕ್ಟೋಬರ್ 19 ರವರೆಗೆ ವಿಸ್ತರಿಸಲಾಯಿತು. ಇದೀಗ ಮತ್ತೆ ವಿಸ್ತರಿಸಲಾಗಿದೆ.ಭಾನುವಾರ ಸಂಜೆಯ ವೇಳೆಗೆ, ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಪ್ರದೇಶವನ್ನು ಹೊರತುಪಡಿಸಿ ರಾಜ್ಯದಾದ್ಯಂತ ಸುಮಾರು 1.43 ಕೋಟಿ ಕುಟುಂಬಗಳಲ್ಲಿ 5.42 ಕೋಟಿ ಜನರ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ.
ಬೆಂಗಳೂರಿನಲ್ಲಿ 56.56 ಲಕ್ಷ ಜನರಿದ್ದು, 18.31 ಲಕ್ಷ ಕುಟುಂಬಗಳನ್ನು ಗಣತಿದಾರರು ಸಂಪರ್ಕಿಸುವುದರೊಂದಿಗೆ ಒಟ್ಟಾರೇ 39.83 ಲಕ್ಷ ಜನರ ಸಮೀಕ್ಷೆ ಕಾರ್ಯ ಆಗಿದ್ದು, ಶೇ. 45. 97 ರಷ್ಟು ಪ್ರಗತಿ ಆಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ಹೇಳುತ್ತವೆ.ರಾಜ್ಯ ಸರ್ಕಾರವು ದೀಪಾವಳಿಯ ನಿಮಿತ್ತ ಅಕ್ಟೋಬರ್ 20 ರಿಂದ ಅಕ್ಟೋಬರ್ 22 ರವರೆಗೆ ಸಮೀಕ್ಷೆಯಲ್ಲಿ ಭಾಗವಹಿಸುವ ಎಲ್ಲರಿಗೂ ರಜಾದಿನಗಳನ್ನು ಘೋಷಿಸಿದೆ.ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.












