(ನ್ಯೂಸ್ ಕಡಬ) newskadaba.com, ಅ.16 ಬೆಂಗಳೂರು: ವೈದ್ಯಕೀಯ ಅಗತ್ಯ ವಸ್ತುಗಳು, ಔಷಧ , ಪರಿಕರಗಳನ್ನು ಡ್ರೋನ್ ಮೂಲಕ ವಿತರಣೆ ಮಾಡುವ ವಿಶೇಷ “ಪೈಲೆಟ್ ಪ್ರಾಜೆಕ್ಟ್”ಗೆ ಏರ್‌ಬೌಂಡ್ ಸಂಸೈಯು ನಾರಾಯಣ ಹೆಲ್ತ್‌ನೊಂದಿಗೆ ಪಾಲುದಾರಿಗೆ ಘೋಷಿಸಿದೆ. ಏರ್‌ಬೌಂಡ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಏರ್‌ಬೌಂಡ್‌ನ ಸಂಸ್ಥಾಪಕ ಮತ್ತು ಸಿಇಒ ನಮನ್ ಪುಷ್ಪ್, ವೈದ್ಯಕೀಯ ಅಗತ್ಯ ವಸ್ತುಗಳನ್ನು ಪೂರೈಸುವ ಸಮಯ ಅತಿ ಪ್ರಾಮುಖ್ಯವಾದದ್ದು. ಈ ಸಂಚಾರ ದಟ್ಟಣೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಅಗತ್ಯವಸ್ತುಗಳನ್ನು ತಲುಪಿಸುವುದು ಕಷ್ಟಕರ.
ಮಾನವರಹಿತ ವೈಮಾನಿಕ ವಾಹನ ಡ್ರೋನ್ ಬಳಸಿಕೊಂಡು ವೈದ್ಯಕೀಯ ಅಗತ್ಯಗಳಾದ ರಕ್ತದ ಮಾದರಿಗಳು, ಪರೀಕ್ಷಾ ಕಿಟ್‌ಗಳು ಮತ್ತು ಅಗತ್ಯ ಸರಬರಾಜುಗಳನ್ನು ಒಳಗೊಂಡಂತೆ ದಿನಕ್ಕೆ 10 ದೈನಂದಿನ ವೈದ್ಯಕೀಯ ವಿತರಣೆಗಳನ್ನು ಪೂರ್ಣಗೊಳಿಸಲು ನಾರಾಯಣ ಹೆಲ್ತ್‌ನೊಂದಿಗೆ ಮೂರು ತಿಂಗಳ ಪ್ರಾಯೋಗಿಕ ಯೋಜನೆಯ ಒಪ್ಪಂದ ಮಾಡಿಕೊಳ್ಳಲಾಗಿದೆ.
ಕೇವಲ ೨.೫ ಕೆ.ಜಿ. ತೂಕ ಹೊಂದಿರುವ ಈಡ್ರೋನ್ ೧ ಕೆ.ಜಿ ತೂಕದ ವಸ್ತುಗಳನ್ನು ಡೆಲಿವರಿ ಮಾಡಲು ಶಕ್ತವಾಗಿದೆ. ಗಂಟೆಗೆ ೬೦ ಕಿ.ಮೀ. ವೇಗದಲ್ಲಿ ಸಾಗುವ ಈ ಡ್ರೋನ್ ೪೦ ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸಲಿದೆ. ಜೊತೆಗೆ, ೪೦೦ ಮೀಟರ್ ಎತ್ತರದ ವರೆಗೂ ಈ ಡ್ರೋನ್ ಹಾರಾಟ ನಡೆಸಲಿದ್ದು, ಸುರಕ್ಷಿತವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಸ್ತುವನ್ನು ತಲುಪಿಸಲಿದೆ. ಈ ಡ್ರೋನ್‌ನ ಮತ್ತೊಂದು ವಿಶೇಷವೆಂದರೆ, ಇದಕ್ಕೆ ವಿಶೇಷ ಸಾಫ್ಟ್‌ವೇರ್ ಅಳವಡಿಸಿದ್ದು, ಅದಕ್ಕೆ ರುದ್ರ ಎಂದು ನಾಮಕರಣ ಮಾಡಲಾಗಿದೆ.








