(ನ್ಯೂಸ್ ಕಡಬ) newskadaba.com, ಅ.15: 2025-26ನೇ ಸಾಲಿನ, 91ನೇ ಆವೃತ್ತಿಯ ರಣಜಿ ಟ್ರೋಫಿಗೆ ಬುಧವಾರ ಚಾಲನೆ ದೊರೆಯಲಿದೆ. ಎಲೈಟ್ ವಿಭಾಗದಲ್ಲಿ 32 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, ಪ್ಲೇಟ್ ಚಾಂಪಿಯನ್‌ಶಿಪ್ 6 ತಂಡಗಳು ಹೋರಾಟ ನಡೆಸಲಿವೆ. ಒಟ್ಟಾರೆ 138 ಪಂದ್ಯಗಳು ನಡೆಯಲಿದೆ. ಭಾರತ ತಂಡದ ವೇಳಾಪಟ್ಟಿ ಟಿ20 ಪಂದ್ಯಗಳಿಂದ ತುಂಬಿರುವ ಕಾರಣ, ರಣಜಿ ಟ್ರೋಫಿಯಲ್ಲಿನ ಪ್ರದರ್ಶನ ಆಟಗಾರರಿಗೆ ಭಾರತ ಟೆಸ್ಟ್ ತಂಡದ ಬಾಗಿಲನ್ನು ತೆರೆಯುವ ಸಾಧ್ಯತೆ ಇಲ್ಲ. ಈ ವರ್ಷ ಉಳಿದಿರುವುದು ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯಷ್ಟೇ. ವಿಂಡೀಸ್ ವಿರುದ್ಧ ಆಡಿದ ತಂಡವನ್ನೇ ಬಹುತೇಕ ಆಯ್ಕೆ ಮಾಡಲಾಗುತ್ತದೆ. ಇನ್ನು 2026ರ ದ್ವಿತೀಯಾರ್ಧದ ವರೆಗೂ ಭಾರತಕ್ಕೆ ಟೆಸ್ಟ್ ಸರಣಿಗಳಿಲ್ಲ.
2 ಹಂತ: ಕಳೆದ ಆವೃತ್ತಿಯಂತೆಯೇ ಈ ಸಲವೂ ಎರಡು ಹಂತಗಳಲ್ಲಿ ಟೂರ್ನಿ ನಡೆಯಲಿದೆ. ಮೊದಲ 5 ಸುತ್ತು ಅ.15ರಿಂದ ನ.19ರ ವರೆಗೂ ನಡೆಯಲಿದೆ. ಬಳಿಕ ಸಯ್ಯದ್ ಮುಸ್ತಾಕ್ ಅಲಿ ಟಿ20 (ನ.26-ಡಿ.18), ವಿಜಯ್ ಹಜಾರೆ ಏಕದಿನ (ಡಿ.26-23.18) ಟೂರ್ನಿಗಳು ನಡೆಯಲಿವೆ. ಇದಾದ ಬಳಿಕ ಜನವರಿ 22ರಿಂದ ರಣಜಿ ಟ್ರೋಫಿ ಪುನಾರಂಭಗೊಳ್ಳಲಿದ್ದು, 2ನೇ ಹಂತದಲ್ಲಿ ಗುಂಪು ಹಂತದ ಇನ್ನೆರಡು ಪಂದ್ಯ, ನಾಕೌಟ್ ಪಂದ್ಯಗಳು ನಡೆಯಲಿವೆ. ಫೆ.24ರಿಂದ ಫೆ.28ರ ವರೆಗೂ ಫೈನಲ್ ನಿಗದಿಯಾಗಿದೆ.











