(ನ್ಯೂಸ್ ಕಡಬ) newskadaba.com, ಸೆ. 19 ಕಾಂತಾರ: ಚಾಪ್ಟರ್ 1 ಸಿನಿಮಾದ ಟ್ರೈಲರ್ ಇದೇ ತಿಂಗಳು (ಸೆಪ್ಟೆಂಬರ್) 22 ನೇ ತಾರೀಖಿನಂದು, ಮಧ್ಯಾಹ್ನ 12:45ಕ್ಕೆ ಬಿಡುಗಡೆ ಆಗಲಿದೆ. ಹೊಂಬಾಳೆಯ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಟ್ರೈಲರ್ ಬಿಡುಗಡೆ ಆಗಲಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಟ್ರೈಲರ್ ವೀಕ್ಷಿಸಬಹುದು. ಸಿನಿಮಾ ಕುರಿತು ರಿಷಬ್ ಶೆಟ್ಟಿ ಅಥವಾ ಚಿತ್ರ ತಂಡ ಯಾವುದೇ ಮಾಹಿತಿಯನ್ನು ಅಷ್ಟಾಗಿ ಹಂಚಿಕೊಳ್ಳುತ್ತಿಲ್ಲ. ಈ ವರೆಗೆ 2 ಪೋಸ್ಟರ್ ಹಾಗೂ ಒಂದು ಮೇಕಿಂಗ್ ವಿಡಿಯೋ ಅನ್ನಷ್ಟೆ ರಿಷಬ್ ಶೆಟ್ಟಿ ಬಿಡುಗಡೆ ಮಾಡಿದ್ದರು.
ಇದು ಕನ್ನಡ ಚಿತ್ರವೊಂದಕ್ಕೆ ಇದುವರೆಗಿನ ಅತಿದೊಡ್ಡ ಪ್ರೀಮಿಯರ್‌ಗಳಲ್ಲಿ ಒಂದಾಗಿದ್ದು, ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿ, ಬಂಗಾಳಿ ಮತ್ತು ಇಂಗ್ಲಿಷ್ ಸೇರಿದಂತೆ 7ಕ್ಕೂ ಹೆಚ್ಚು ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತದೆ. ಈ ಕ್ರಮವು ಆರಂಭಿಕ ಸಂಚಲನವನ್ನು ಸೃಷ್ಟಿಸುವ ನಿರೀಕ್ಷೆಯಿದೆ.ರಿಷಬ್ ಶೆಟ್ಟಿ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವು, ಜಾಗತಿಕ ಮಟ್ಟದಲ್ಲಿ ಯಶಸ್ಸು ಕಂಡ ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿದೆ..
ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರ ಅದ್ಭುತ ಸಂಗೀತ, ಛಾಯಾಗ್ರಾಹಕ ಅರವಿಂದ್ ಎಸ್. ಕಶ್ಯಪ್ ಅವರ ದೃಶ್ಯ ವೈಭವ ಮತ್ತು ವಸ್ತ್ರ ವಿನ್ಯಾಸಕಿ ಪ್ರಗತಿ ಶೆಟ್ಟಿ ಅವರ ವಿಶಿಷ್ಟ ಕಲಾಕೃತಿಗಳು ಚಿತ್ರಕ್ಕೆ ಮೆರುಗು ನೀಡಲಿವೆ. ರಿಷಬ್ ಶೆಟ್ಟಿ, ಜೊತೆಗೆ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಅವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಕಾಂತಾರ ಅಧ್ಯಾಯ 1’ ಚಿತ್ರವು ಕಲೆ, ಭಕ್ತಿ ಮತ್ತು ಶಕ್ತಿಯನ್ನು ಒಳಗೊಂಡಿದ್ದು, ಮತ್ತೊಮ್ಮೆ ಇತಿಹಾಸ ಸೃಷ್ಟಿಸಲು ಸಿದ್ಧವಾಗಿದೆ.












