(ನ್ಯೂಸ್ ಕಡಬ) newskadaba.com, ಸೆ.12 : ಮದ್ಯದ ಅಮಲಿನಲ್ಲಿ ಪತಿ ಮನೆಗೆ ಹೋಗಿ ಪತ್ನಿಯೊಂದಿಗೆ ಜಗಳವಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಗ್ರಾಮದಲ್ಲಿ ನಡೆದಿದೆ.
ರೇಖಾ (38) ಕೊಲೆಯಾದ ಮಹಿಳೆ. ಆರೋಪಿ ಪತಿ ರಘು ಘಟನೆ ನಂತರ ಪರಾರಿಯಾಗಿದ್ದಾನೆ. ರಘು ಪ್ರತಿನಿತ್ಯ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿಯೊಂದಿಗೆ ಜಗಳವಾ ಡುತ್ತಿದ್ದ.ನಿನ್ನೆ ರಾತ್ರಿ ಮನೆಯಲ್ಲಿದ್ದ ಇಬ್ಬರು ಗಂಡು ಮಕ್ಕಳು ಟ್ಯೂಷನ್‌ಗೆ ತೆರಳಿದ್ದ ವೇಳೆ, ಮದ್ಯದ ಅಮಲಿನಲ್ಲಿ ರಘು ಮನೆಗೆ ಹೋಗಿದ್ದಾನೆ.
ಆ ಸಂದರ್ಭದಲ್ಲಿ ಪತ್ನಿಯೊಂದಿಗೆ ಜಗಳವಾಡಿ, ಆಕೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ಚಾಕುವಿನಿಂದ ಎದೆಗೆ ಇರಿದು ಪರಾರಿಯಾಗಿದ್ದಾನೆ.ತೀವ್ರ ರಕ್ತಸ್ರಾವದಿಂದ ರೇಖಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಹಿರೀಸಾವೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ರಘು ಪತ್ತೆಗೆ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.













