(ನ್ಯೂಸ್ ಕಡಬ) newskadaba.com, ಆ.05: ಬೆಳ್ತಂಗಡಿ: ಧರ್ಮಸ್ಥಳ ಶವಗಳನ್ನು ಹೂತಿಟ್ಟ ಶೋಧಕಾರ್ಯ ಪ್ರಕರಣದಲ್ಲಿ ಸಹಾಯಕ ಆಯುಕ್ತೆ (ಎಸಿ) ಸ್ಟೆಲ್ಲಾ ವರ್ಗೀಸ್ ಹಾಗೂ ವಿಶೇಷ ತನಿಖಾ ತಂಡ (ಎಸ್ಐಟಿ) ನಡುವಿನ ಗೊಂದಲ ಮತ್ತೊಮ್ಮೆ ಬೆಳಕಿಗೆ ಬಂದಿದೆ. ನಿನ್ನೆ ಶೋಧಕಾರ್ಯಕ್ಕಾಗಿ ನಿಗದಿಪಡಿಸಿದ 11ನೇ ಪಾಯಿಂಟ್ ಬಿಟ್ಟು, ಪುತ್ತೂರು ಉಪ ವಿಭಾಗ ಎಸಿ ಸ್ಟೆಲ್ಲಾ ವರ್ಗೀಸ್ ಹೊಸ ಸ್ಥಳದಲ್ಲಿ ಮಹಜರು ನಡೆಸಲು ಸೂಚಿಸಿದ ಕ್ರಮಕ್ಕೆ ಎಸ್ಐಟಿ ಅಸಮಾಧಾನ ವ್ಯಕ್ತಪಡಿಸಿದೆ.
ಈ ಹೊಸ ಸ್ಥಳದಲ್ಲಿ ಭೂಮಿಯ ಮೇಲ್ಮೈಯಲ್ಲೇ ಒಬ್ಬ ಪುರುಷನ ಸಂಪೂರ್ಣ ಅಸ್ಥಿಪಂಜರ ಪತ್ತೆಯಾಗಿದೆ. ಫಾರೆನ್ಸಿಕ್ ತಂಡದ ಪ್ರಾಥಮಿಕ ಅಂದಾಜಿನ ಪ್ರಕಾರ, ಮೃತ ವ್ಯಕ್ತಿ ಒಂದೂವರೆ ವರ್ಷಗಳ ಹಿಂದೆ ಸಾವನ್ನಪ್ಪಿರಬಹುದಾಗಿದೆ. ಅಸ್ಥಿಪಂಜರದ ಜೊತೆಗೆ ಪುರುಷನ ಉಡುಪು ಮತ್ತು ಹಗ್ಗ ಪತ್ತೆಯಾಗಿದ್ದು, ಆತ್ಮ1ಹತ್ಯೆಯ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಎಸ್ಐಟಿ, ಇದು ಧರ್ಮಸ್ಥಳ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿದ ‘ಅನಾಮಿಕ ಸಾವು’ ಪ್ರಕರಣವಾಗಿದ್ದು, ಕಾರ್ಯಾಚರಣೆ ನಿಯಮಗಳಡಿ ಬರುವುದಿಲ್ಲ ಎಂಬ ವಾದಿಸಿದೆ. ಭೂಮಿಯ ಮೇಲ್ಭಾಗದಲ್ಲೇ ಪತ್ತೆಯಾದ ಈ ಅಸ್ಥಿಪಂಜರವನ್ನೂ ಸ್ಥಳೀಯ ಪೊಲೀಸ್ ಠಾಣೆಯೇ ಕಾನೂನಿನ ಪ್ರಕಾರ ನಿರ್ವಹಿಸಬೇಕಾಗಿತ್ತು. ಮೃತನ ಗುರುತು ಹಾಗೂ ಸಾವಿನ ಕಾರಣ ಪತ್ತೆಹಚ್ಚಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳುವ ಜವಾಬ್ದಾರಿ ಧರ್ಮಸ್ಥಳ ಪೊಲೀಸ್ ಠಾಣೆಯದ್ದಾಗಿದೆ.
ಆದರೆ, ಅನಾಮಿಕ ದೂರುದಾರ ಈ ಸ್ಥಳವನ್ನು ತೋರಿಸಿದ್ದರಿಂದ, ಎಸಿ ಸ್ಟೆಲ್ಲಾ ವರ್ಗೀಸ್ ಅವರ ಸೂಚನೆಯ ಮೇರೆಗೆ ಮಹಜರು ನಡೆಸಲಾಯಿತು. ಈ ಕ್ರಮದ ವೇಳೆ ಎಸ್ಐಟಿ ಮತ್ತು ಎಸಿ ಸ್ಟೆಲ್ಲಾ ವರ್ಗೀಸ್ ನಡುವಿನ ಗೊಂದಲ ಕೆಲವು ಕಾಲ ಮುಂದುವರೆಯಿತು. ಅಂತಿಮವಾಗಿ ಎಸಿ ಸ್ಟೆಲ್ಲಾ ವರ್ಗೀಸ್ ಸೂಚನೆಯಂತೆ ಅಸ್ಥಿಪಂಜರವನ್ನು ವಶಕ್ಕೆ ಪಡೆದು ಅಗತ್ಯ ದಾಖಲೆ ಪ್ರಕ್ರಿಯೆಗಳು ಪೂರ್ಣಗೊಳಿಸಲಾಯಿತು.
ಅನಾಮಿಕ ದೂರುದಾರನ ಪ್ರಕಾರ, 1998 ರಿಂದ 2014 ರವರೆಗೆ ಧರ್ಮಸ್ಥಳದ ಕಾಡಿನಲ್ಲಿ ಹೂತಿಟ್ಟ ಶವಗಳ ಶೋಧಕಾರ್ಯ ಕಾರ್ಯ ನಡೆಯುತ್ತಿದೆ. ಆದರೆ, ಒಂದೂವರೆ ವರ್ಷಗಳ ಹಿಂದೆ ಮೃತಪಟ್ಟ ಈ ಪುರುಷನ ದೇಹವೂ ಎಸ್ಐಟಿ ವಶಕ್ಕೆ ಬಂದಿದ್ದು, ಅದರೊಂದಿಗೆ ಕೆಲ ಕೊಳೆತ ದೇಹ ಭಾಗಗಳೂ ಪತ್ತೆಯಾಗಿವೆ. ಸದ್ಯ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಧರ್ಮಸ್ಥಳ ಪೊಲೀಸರು ಹಾಗೂ ಎಸ್ಐಟಿ ಮುಂದಿನ ಹಂತದ ತನಿಖೆಯನ್ನು ಮುಂದುವರೆಸಲಿದ್ದಾರೆ.








